"ಗಾಳಿಪಟ' ಭಾವನಾ ರಾವ್ ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ಒಂದು ಸುತ್ತು ಹಾಕಿಕೊಂಡು, ಇದೀಗ ಮತ್ತೆ ಕನ್ನಡದಲ್ಲಿ ಬಿಜಿಯಾಗಿದ್ದಾರೆ. ಚಿತ್ರದಿಂದ ಚಿತ್ರಕ್ಕೆ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಮಿಂಚಿರುವ ಅವರು ಇದೀಗ ಅತ್ಯಂತ ಸವಾಲಿನ ಪಾತ್ರಕ್ಕೆ ಸಿದ್ಧತೆ ನಡೆಸಿದ್ದಾರೆ. ಹೆಸರು "ದ ಗರ್ಲ್'. ಇತ್ತೀಚೆಗಷ್ಟೆ ಚಿತ್ರದ ಮುಹೂರ್ತ ನೆರವೇರಿದ್ದು, "ನಿರ್ದೇಶಕ ಗಿರೀಶ್ ಪಿ. ನಾಯರ್ ಈ ಸಿನಿಮಾ ನೀವೇ ಮಾಡಬೇಕು ಅಂತ ಬಂದು ಕಥೆ ಹೇಳಿದರು. ಕಥೆ ತುಂಬ ಇಂಟರೆಸ್ಟಿಂಗ್ ಅಂತನ್ನಿಸಿತು. ಇದುವರೆಗೂ ನಾನು ಇಂತಹ ಪಾತ್ರದಲ್ಲಿ ನಟಿಸಿಲ್ಲ. ನನ್ನ ಕರಿಯರ್ನಲ್ಲೇ ಅತ್ಯಂತ ಸವಾಲಿನ ಪಾತ್ರವಿದು. ಇಡೀ ಸಿನಿಮಾ ನನ್ನ ಹೆಗಲ ಮೇಲಿದ್ದು, ನನಗೂ ಒತ್ತಡವಿದೆ. ಆದರೆ, ತುಂಬ ಚೆನ್ನಾಗಿ ನಿಭಾಯಿಸುತ್ತೇನೆ ಎಂಬ ಭರವಸೆಯೂ ಇದೆ. ಇದು ನಾನು ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಮೊದಲ ಮಹಿಳಾ ಪ್ರಧಾನ ಸಿನಿಮಾ. ಪ್ರಾರಂಭದಿಂದ ಕೊನೆಯವರೆಗೂ ಕುತೂಹಲ ಕಾಯ್ದುಕೊಂಡು ಕ್ಲೆಮ್ಯಾಕ್ಸ್ನಲ್ಲಿ ಇದು ಹಾರರಾ ಅಥವಾ ಸಸ್ಪೆನ್ಸ್ ಥ್ರಿಲ್ಲರಾ ಅಂತ ಪ್ರೇಕ್ಷಕರಿಗೆ ರಿವೀಲ್ ಆಗಲಿದೆ. ಸ್ವಲ್ಪ ತಲೆಗೆ ಹುಳ ಬಿಡುವ "ದ ಗರ್ಲ್'ನಲ್ಲಿ ನಾನು ಹಲವು ಶೇಡ್ಗಳಲ್ಲಿ ಕಾಣಿಸಿಕೊಳ್ಳಲಿದ್ದೇನೆ' ಎಂದು ಮಾಹಿತಿ ನೀಡುತ್ತಾರೆ.