ಬೆಂಗಳೂರು:
ಈ ಬಾರಿಯ ಕನ್ನಡ ರಾಜ್ಯೋತ್ಸವ ಚಿತ್ರರಂಗದಲ್ಲಿ ಹಲವು ಮೊದಲುಗಳಿಗೆ ಸಾಯಾಗಿದೆ. "ಫಸ್ಟ್ ಲವ್ ಗುರು' ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಲಾಗಿದ್ದು, ಕ ಮ್ಯೂಸಿಕ್ ಮೂಲಕ ರಿಲೀಸ್ ಆದ ಮೊದಲ ಆಡಿಯೋ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ವಿಶೇಷ ಅಂದರೆ ನಿರ್ದೇಶಕ ಗುರುಪ್ರಸಾದ್ ಮತ್ತು ಸಂಗೀತ ನಿರ್ದೇಶಕ ಮನೋಜವಂ ಆತ್ರೇಯಗೂ ಇದು ಮೊದಲ ಚಿತ್ರ. ಸಿನಿಮಾ ಪತ್ರಕರ್ತ, ಪ್ರಚಾರಕರ್ತ ಕ ಪಿಚ್ಚರ್ ಖ್ಯಾತಿಯ ಪ್ರವಿಣ್ ಏಕಾಂತ "ಫಸ್ಟ್ ಲವ್ ಗುರು' ಆಡಿಯೋ ಹಕ್ಕುಗಳನ್ನು ಪಡೆದು ಕ ಮ್ಯೂಸಿಕ್ ಮೂಲಕ ರಿಲೀಸ್ ಮಾಡಿದ್ದಾರೆ.
ಭಾನುವಾರ (ನ. 1) ನಾದಬ್ರಹ್ಮ ಹಂಸಲೇಖರ ಅಮೃತವಾಣಿಯೊಂದಿಗೆ, ಚಿತ್ರಸಾಹಿತಿ ಕವಿರಾಜ್ ಕ ಮ್ಯೂಸಿಕ್ ಆಡಿಯೋ ಲೇಬಲ್ ಲಾಂಚ್ ಮಾಡಿದರು. ಅವರಿಗೆ ನಿರ್ದೇಶಕ ಚೇತನ್ ಕುಮಾರ್ ಮತ್ತು ಚಿತ್ರಸಾಹಿತಿ ನಾಗಾರ್ಜುನ್ ಶರ್ಮಾ ಜತೆಯಾದರು. ಇದೇ ಸಂದರ್ಭದಲ್ಲಿ "ಫಸ್ಟ್ ಲವ್ ಗುರು' ಮೊದಲ ಟೈಟಲ್ ಸಾಂಗ್ ರಿಲೀಸ್ ಮಾಡಲಾಯಿತು. ಪ್ರಮೋದ್ ಮರವಂತೆ ಸಾಹಿತ್ಯ, ವರುಣ್ ರಾಮಚಂದ್ರ ಮತ್ತು ಸುರಭಿ ಧ್ವನಿಯಲ್ಲಿ ಹಾಡು ಮೂಡಿಬಂದಿದೆ. ಈ ರೊಮ್ಯಾಂಟಿಕ್ ಸಾಂಗ್ನಲ್ಲಿ ಯುದೀತ್ ಶೆಟ್ಟಿ, ರಾಧ್ಯಾ ರಾಜ್ ಹದಿಹರೆಯದ ಪ್ರೇಮಿಗಳಾಗಿ ಕಾಣಿಸಿಕೊಂಡಿದ್ದು, ಯುವಮನಸ್ಸುಗಳನ್ನು ಸೆಳೆಯುವಂತಿದೆ. ಯುದೀತ್, ರಾಧ್ಯಾ ಜತೆ ಶೋಭರಾಜ್, ಚಂದ್ರಕಲಾ ಮೋಹನ್, ಭಾಗ್ಯಶ್ರೀ, ಮ್ಯಾಜಿಕ್ ರಮೇಶ್, ಶ್ರೀಧರ್ ತಾರಾಗಣದಲ್ಲಿದ್ದಾರೆ. ಇದೇ 27ರಂದು ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರಲಿದೆ.