ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಕೆಲವು ಬೆಳವಣಿಗೆಯನ್ನು ನೋಡಿ ಸಹನೆ ಕಳೆದುಕೊಂಡ ಸುದೀಪ್, ವೇದಿಕೆಯ ಮೇಲೆಯೇ ತಮ್ಮ ಆಕ್ರೋಶದ ಮಾತುಗಳನ್ನು ಆಡಿದರು. ಮಾರ್ಕ್ ಸಿನಿಮಾ ಡಿ.25ಕ್ಕೆ ಬಿಡುಗಡೆಯಾಗುತ್ತಿದೆ. ಆದರೆ, ಕಳೆದ ಒಂದು ವಾರದಿಂದ ಮಾರ್ಕ್ ಸಿನಿಮಾ ಬಗ್ಗೆ ನೆಗೆಟಿವ್ ಪ್ರಚಾರಗಳು ಹಬ್ಬಿವೆ. ಅಲ್ಲದೆ, ಸಿನಿಮಾವನ್ನು ಪೈರಸಿ ಮಾಡಿ ಹಂಚುತ್ತೇವೆ ಎಂಬ ಬೆದರಿಕೆಗಳು ಬರುತ್ತಿವೆ. ಮಾರ್ಕ್ ಸಿನಿಮಾ ಕನ್ನಡ ಸಿನಿಮಾ ಅಲ್ಲ, ಅದೊಂದು ತಮಿಳು ಸಿನಿಮಾ, ಯಾರೂ ಕೂಡ ಮಾರ್ಕ್ ಸಿನಿಮಾವನ್ನು ನೋಡಬೇಡಿ ಎಂದು ಜಾಲತಾಣದಲ್ಲಿ ಅನೇಕರು ಪೋಸ್ಟ್ಗಳನ್ನು ಹರಿಬಿಡುತ್ತಿದ್ದಾರೆ. ಅಲ್ಲದೆ, ಸುದೀಪ್ ಅವರು ಕಾವೇರಿ ನೀರು ತಮಿಳುನಾಡಿಗೆ ಸೇರಿದ್ದು ಎಂದು ತಮಿಳುನಾಡಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಸಹ ಹರಿಬಿಡುತ್ತಿದ್ದಾರೆ. ಹೀಗೆ, ಇಲ್ಲಸಲ್ಲದ ಪೋಸ್ಟ್ಗಳನ್ನು ಮಾಡುತ್ತಿದ್ದಾರೆ. ಇದು ಸುದೀಪ್ ಅವರ ಗಮನಕ್ಕೆ ಬಂದಿದ್ದು, ಹುಬ್ಬಳ್ಳಿ ಪ್ರೀರಿಲೀಸ್ ಈವೆಂಟ್ ವೇದಿಕೆಯಲ್ಲೇ ಕಿಚ್ಚ ಗುಡುಗಿದ್ದಾರೆ. ಆದರೆ, ಸುದೀಪ್ ಅವರು ಯಾರನ್ನೋ ಉದ್ದೇಶಿಸಿ ನೇರವಾಗಿ ಈ ಮಾತುಗಳನ್ನು ಹೇಳಿಲ್ಲ. ತಮ್ಮ ಚಿತ್ರದ ಪರ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಿಡಿಕಾರಿದ್ದಾರೆ. ಆದರೆ, ದರ್ಶನ್ ಅಭಿಮಾನಿಗಳು, ಸುದೀಪ್ ಅವರು ತಮಗೇ ಹೇಳಿದ್ದಾರೆಂದು ಭಾವಿಸಿ, ಜಾಲತಾಣದಲ್ಲಿ ಸುದೀಪ್ ವಿರುದ್ಧ ಮುಗಿಬಿದ್ದಿದ್ದಾರೆ.