ಬೆಂಗಳೂರು: ‘ಮಹಾನಟಿ’ ರಿಯಾಲಿಟಿ ಶೋ ವಿಜೇತೆ, ಮೈಸೂರು ಮೂಲದ ನಟಿ ಪ್ರಿಯಾಂಕಾ ಆಚಾರ್ ಕಳೆದ ವರ್ಷ ‘ಏಳುಮಲೆ’ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಪರಿಚಯವಾದರು. ಆ ಚಿತ್ರದಲ್ಲಿ ಅವರ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿ, ಚಿತ್ರರಂಗದಲ್ಲಿ ಭರವಸೆ ನಟಿಯಾಗಿ ಗುರುತಿಸಿಕೊಂಡಿದ್ದರು. ಮೊದಲ ಚಿತ್ರದ ಯಶಸ್ಸಿನ ಬಳಿಕ ಪ್ರಿಯಾಂಕಾ ಏನು ಮಾಡುತ್ತಿದ್ದಾರೆ? ಮುಂದಿನ ಸಿನಿಮಾ ಯಾವಾಗ? ಅಂತೆಲ್ಲ ಅಭಿಮಾನಿಗಳು ಕೇಳುತ್ತಿದ್ದರು. ಇದೀಗ ಆ ಕುತೂಹಲಕ್ಕೆ ಪ್ರಿಯಾಂಕಾ ಹುಟ್ಟುಹಬ್ಬದಂದೇ ತೆರೆ ಬಿದ್ದಿದೆ. ಹೌದು, ಪ್ರಿಯಾಂಕಾ ಆಚಾರ್ ಮಂಗಳವಾರ (ಜ.20) ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಇದೇ ಖುಷಿಯಲ್ಲಿ ಎರಡನೇ ಸಿನಿಮಾ ಘೋಷಿಸಿದ್ದಾರೆ. ಸುದೀಪ್ ಆಪ್ತಬಳಗದಲ್ಲಿ ಗುರುತಿಸಿಕೊಂಡಿದ್ದ, ‘ರನ್ನ’, ‘ವಿಕ್ಟರಿ’ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಕಿರಣ್ ವಿಶ್ವನಾಥ್ ಈ ಹೊಸ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಇನ್ನು, ಚಿತ್ರದ ಟೈಟಲ್, ನಾಯಕ, ತಾರಾಬಳಗ ಘೋಷಣೆಯಾಗಬೇಕಿದೆ. ಸದ್ಯ ಪ್ರಿಯಾಂಕಾ ಪಾತ್ರವನ್ನು ಪರಿಚಯಿಸಿ, ಚಿತ್ರತಂಡ ಬರ್ತ್‌ಡೇಗೆ ಉಡುಗೊರೆ ನೀಡಿದೆ. ಇದೇ ಸಂತಸದಲ್ಲಿ ಪ್ರಿಯಾಂಕಾ ಸಿನಿಮಾ ಹಾಗೂ ಪಾತ್ರದ ಕುರಿತು, ‘‘ಏಳುಮಲೆ’ ಚಿತ್ರದ ಶೂಟಿಂಗ್ ನಡೆಯುವಾಗಲೇ ಈ ಪ್ರಾಜೆಕ್ಟ್‌ಗೆ ಸಹಿ ಮಾಡಿದ್ದೆ. ಮೊದಲ ಚಿತ್ರದಲ್ಲಿ ಸಾಂಪ್ರ್ರದಾಯಿಕವಾಗಿ ಕಾಣಿಸಿಕೊಂಡಿದ್ದೆ. ಆದರೆ, ಈ ಎರಡನೇ ಚಿತ್ರದಲ್ಲಿ ಸ್ವಲ್ಪ ವಿಭಿನ್ನ ಎಂಬಂತೆ ಮಾಡರ್ನ್ ಹುಡುಗಿಯ ಪಾತ್ರದಲ್ಲಿ ಇರಲಿದ್ದೇನೆ. ಸಿನಿಮಾದ ಟೈಟಲ್, ನಿರ್ದೇಶಕರು, ತಾರಾಬಳಗ ಅಧಿಕೃತವಾಗಿ ಚಿತ್ರತಂಡದಿಂದ ಘೋಷಣೆಯಾಗಬೇಕು. ನನ್ನ ಹುಟ್ಟುಹಬ್ಬದ ಪ್ರಯುಕ್ತ ಮೊದಲಿಗೆ ನನ್ನ ಪಾತ್ರ ಪರಿಚಯಿಸಿದ್ದಾರೆ. ಈ ಚಿತ್ರದಲ್ಲಿ ನನ್ನದು ‘ಸಿರಿ’ ಎಂಬ ಯುಟ್ಯೂಬರ್ ಪಾತ್ರ. ಈಗಾಗಲೇ ಅರ್ಧ ಶೂಟಿಂಗ್ ಮುಗಿಸಿದ್ದೇನೆ. ಚಿತ್ರೀಕರಣ ಪ್ರಾರಂಭಕ್ಕೂ ಮುನ್ನ ಯುಟ್ಯೂಬರ್‌ಗಳ ಕಾರ್ಯವೈಖರಿ ಕುರಿತು ಮಾಹಿತಿ ಸಂಗ್ರಹಿಸಿಕೊಂಡಿದ್ದೆ. ಅವರು ಹೇಗೆ ಮಾತನಾಡುತ್ತಾರೆ? ಅವರ ಹಾವ-ಭಾವ, ಸ್ಟೈಲ್, ಮ್ಯಾನರಿಸಂ ಎಲ್ಲವನ್ನೂ ಅರಿತು ವರ್ಕ್‌ಶಾಪ್ ಮಾಡಿದ ಬಳಿಕವೇ ಶೂಟಿಂಗ್‌ಗೆ ತೆರಳಿದೆ. ಮುಂದಿನ ಹಂತದ ಶೂಟಿಂಗ್‌ಗೆ ಕಾತುರಳಾಗಿದ್ದೇನೆ’ ಎಂದು ಸಂತಸ ಹಂಚಿಕೊಳ್ಳುತ್ತಾರೆ.