ಪರಭಾಷೆಯಲ್ಲಿ ಒಂದೆರೆಡು ಸಿನಿಮಾಗಳಲ್ಲಿ ನಟಿಸಿ, ಮಿಂಚಿದ ನಟಿಯರನ್ನು ಸ್ಯಾಂಡಲ್‌ವುಡ್‌ಗೆ ಕರೆತರುವ ಪ್ರಯತ್ನ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಈ ಹಿಂದೆ ಖುಷ್ಬೂ, ಚೂಹಿ ಚಾವ್ಲಾ ಸೇರಿ ಹಲವು ನಟಿಯರು ಇದೇ ರೀತಿ ಚಂದನವನಕ್ಕೆ ಪದಾರ್ಪಣೆ ಮಾಡಿದ್ದರು. ಈ ಸಂಪ್ರದಾಯ ಇಂದಿಗೂ ನಿಂತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಪಾಯಲ್ ರಜಪೂತ್ (ಹೆಡ್‌ಬುಷ್), ಮಾಳವಿಕಾ ನಾಯರ್ (ಕೃಷ್ಣಂ ಪ್ರಣಯ ಸಖಿ), ಅಮೃತಾ ಅಯ್ಯರ್ (ಡಿಜಾಂಗ್ ಕೃಷ್ಣಮೂರ್ತಿ) ಸೇರಿ ಹಲವು ನಟಿಯರು ಕನ್ನಡಕ್ಕೆ ಬಂದಿದ್ದಾರೆ. ಈ ಪಟ್ಟಿಗೆ ಇದೀಗ ಹೊಸ ಸೇರ್ಪಡೆ ಐಶ್ವರ್ಯಾ ಶರ್ಮಾ. ಮುಂಚೆ ರೂಪದರ್ಶಿಯಾಗಿ ಗಮನಸೆಳೆದಿದ್ದ ಐಶ್ವರ್ಯಾ, ಕಳೆದ ವರ್ಷ ತೆರೆಕಂಡಿದ್ದ ಪ್ರದೀಪ್ ರಂಗರಾಜನ್ ಅಭಿನಯದ ತಮಿಳಿನ ‘ಡ್ಯೂಡ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ್ದರು. ಆ ಚಿತ್ರದಲ್ಲಿ ಅವರ ಸಂಯುಕ್ತಾ ಪಾತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಈ ಸುಂದರಿಯನ್ನು ಸ್ಯಾಂಡಲ್‌ವುಡ್‌ಗೆ ಕರೆತರಲಾಗುತ್ತಿದೆ. ಆರ್. ರವೀಶ್ ಕಥೆ, ಚಿತ್ರಕಥೆ ಬರೆದಿರುವ, ಹೊಸ ಪ್ರತಿಭೆ ಲಿಯೋ ನಿರ್ದೇಶಿಸಲಿರುವ ಹೊಸ ಚಿತ್ರದ ಮೂಲಕ ಐಶ್ವರ್ಯಾ ಕನ್ನಡ ಚಿತ್ರರಂಗಕ್ಕೆ ಡೆಬ್ಯೂ ಮಾಡಲಿದ್ದಾರೆ. ಪ್ರಜ್ವಲ್ ದೇವರಾಜ್ ನಟಿಸಿ, ಲೋಹಿತ್ ನಿರ್ದೇಶಿಸಿದ್ದ ‘ರಾಕ್ಷಸ’ ನಿರ್ಮಾಪಕ ದೀಪು ಈ ಚಿತ್ರದ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಫೆಬ್ರವರಿಯಿಂದ ಈ ಹೊಸ ಚಿತ್ರದ ಶೂಟಿಂಗ್ ಆರಂಭವಾಗಲಿದೆ. ಶೀಘ್ರವೇ ನಾಯಕ ಸೇರಿ ಇತರ ಕಲಾವಿದರು, ತಾಂತ್ರಿಕ ಬಳಗದ ಕುರಿತು ಮಾಹಿತಿ ನೀಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಉಳಿದಂತೆ ಐಶ್ವಯಾ ಶರ್ಮಾ, ಮಲಯಾಳಂ ನಟ ಬಾಸಿಲ್ ಜೋಸೆಫ್ ಕಾಲಿವುಡ್‌ಗೆ ಡೆಬ್ಯೂ ಮಾಡುತ್ತಿರುವ ‘ರಾವಡಿ’ ಚಿತ್ರದಲ್ಲೂ ನಟಿಸುತ್ತಿದ್ದಾರೆ. -ಏಜೆನ್ಸೀಸ್