ಆಟೋ ಡ್ರೈವರ್ ‘ದೊಡ್ಮನ್ಸ’: ಶರತ್ ಕೃಷ್ಣ ನಟಿಸಿ, ನಿರ್ದೇಶಿಸಿರುವ ಆ್ಯಕ್ಷನ್ ಫ್ಯಾಮಿಲಿ ಡ್ರಾಮಾ

ಶಿಲ್ಪಾ, ಶರತ್​, ರೇಷ್ಮಾ
ಶಿಲ್ಪಾ, ಶರತ್​, ರೇಷ್ಮಾ
Published on

ಪ್ರಮುಖ ಮುಖ್ಯಾಂಶಗಳು

  • ಆಟೋ ಡ್ರೈವರ್ ಜೀವನದ ಸುತ್ತ ದೊಡ್ಮನ್ಸ ಸಿನಿಮಾ
  • ಬೆಂಗಳೂರು, ಅಹಮಬಾದ್ ನಲ್ಲಿ ಶೂಟಿಂಗ್ ನಡೆಸಿದ ಚಿತ್ರ
  • ಆಟೋ ಚಾಲಕರಿಗೆ ವಿಶೇಷ ಶೋ ಜತೆಗೆ ವಿಶೇಷ ಉಡುಗೊರೆ
ಬೆಂಗಳೂರು: ಆಟೋ ಚಾಲಕರ ಬದುಕಿನ ಸುತ್ತ ಸಾಗುವ ಹಲವು ಸಿನಿಮಾಗಳು ಬಂದಿವೆ. ಶಂಕರ್ ನಾಗ್ ಅಭಿನಯದ ‘ಆಟೋ ರಾಜ’, ಉಪೇಂದ್ರರ ‘ಆಟೋ ಶಂಕರ್’, ದರ್ಶನ್ ನಟಿಸಿದ್ದ ‘ಸಾರಥಿ’ ಹೀಗೆ ಸಾಗುತ್ತದೆ. ಇದೀಗ ಇದೇ ಹಾದಿಯಲ್ಲಿ ‘ದೊಡ್ಮನ್ಸ’ ಎಂಬ ಹೊಸ ಚಿತ್ರ ಮೂಡಿಬರುತ್ತಿದೆ. ಕನ್ನಡದ ಕೆಲ ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಶರತ್ ಕೃಷ್ಣ ಈ ಸಿನಿಮಾದಲ್ಲಿ ನಟಿಸುವ ಜತೆಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಬಹುತೇಕ ಶೂಟಿಂಗ್ ಪೂರ್ಣಗೊಳಿಸಿರುವ ಚಿತ್ರತಂಡ, ಸದ್ಯ ತೆರೆಗೆ ತರಲು ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಆ್ಯಕ್ಷನ್-ಟೀಸರ್ ರಿಲೀಸ್ ಮಾಡಲಾಯಿತು. ‘ನನ್ನ ತಂದೆ ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆ ಹೊಂದಿದ್ದರು. ಆದರೆ, ಅದು ಸಾಧ್ಯವಾಗಿರಲಿಲ್ಲ. ಇದೀಗ ಆ ಕನಸು ನನ್ನಿಂದ ನನಸಾಗುತ್ತಿದೆ. ಚಿತ್ರರಂಗದಲ್ಲಿ ಕೆಲ ವರ್ಷ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿ, ಇದೀಗ ನಾನೇ ನಿರ್ದೇಶನಕ್ಕಿಳಿದು, ನಟಿಸುತ್ತಿದ್ದೇನೆ. ‘ದೊಡ್ಮನ್ಸ’ ಬೆಂಗಳೂರಿನಲ್ಲಿ ನಡೆಯುವ ಕಥೆ. ಸಾಮಾನ್ಯ ಆಟೋ ಚಾಲಕನೊಬ್ಬ ದೊಡ್ಡ ಮನಸ್ಸಿನ ವ್ಯಕ್ತಿ ಹೇಗೆ ಆಗುತ್ತಾನೆ ಎಂಬುದನ್ನು ಕಾಲ್ಪನಿಕ ಕಥೆಯ ಮೂಲಕ ನಿರೂಪಿಸುತ್ತಿದ್ದೇವೆ. ಚಿತ್ರದಲ್ಲಿ ಆ್ಯಕ್ಷನ್ ಜತೆಗೆ ಫ್ಯಾಮಿಲಿ ಡ್ರಾಮಾದ ಅಂಶಗಳಿವೆ. ಬಹುತೇಕ ಬೆಂಗಳೂರಿನಲ್ಲಿ ಶೂಟಿಂಗ್ ಮಾಡಲಾಗಿದ್ದು, ಒಂದು ಸಾಂಗ್ ಮಾತ್ರ ಅಹಮದಾಬಾದ್‌ನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಬಿಡುಗಡೆಗೂ ಮುನ್ನ ಆಟೋ ಚಾಲಕರಿಗೆ ಪೇಯ್ಡ-ಪ್ರೀಮಿಯರ್ ಶೋ ನಡೆಸಿ, ಅವರ ಟಿಕೆಟ್‌ಗಳ ಲಕ್ಕಿ ಡಿಪ್ ಎತ್ತಿ, ವಿಜೇತರಿಗೆ ಆಟೋ ಉಡುಗೊರೆ ನೀಡಲು ಚಿತ್ರತಂಡ ನಿರ್ಧರಿಸಿದೆ’ ಎಂದು ಶರತ್ ಕೃಷ್ಣ ಮಾಹಿತಿ ನೀಡುತ್ತಾರೆ. ಇಲ್ಲಿ ಶರತ್‌ಗೆ ಇಬ್ಬರು ನಾಯಕಿಯರಿದ್ದು, ರೇಷ್ಮಾ ಲಿಂಗರಾಜಪ್ಪ, ಶಿಲ್ಪಾ ನಟಿಸಿದ್ದಾರೆ. ಜತೆಗೆ ಹುಲಿ ಕಾರ್ತಿಕ್, ಬಲ ರಾಜವಾಡಿ ಕಲಾಬಳಗದಲ್ಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net