ಮತ್ತೆ ಒಂದಾದ ಮಹೇಂದರ್- ಹಂಸಲೇಖ : ಇದೇ 16ಕ್ಕೆ ಘೋಷಣೆಯಾಗಲಿದೆ ದಿಗ್ಗಜರ ಹೊಸ ಸಿನಿಮಾ

ಮಹೇಂದರ್, ಹಂಸಲೇಖ, ವಿಜಯಕುಮಾರ್
ಮಹೇಂದರ್, ಹಂಸಲೇಖ, ವಿಜಯಕುಮಾರ್
Published on

ಪ್ರಮುಖ ಮುಖ್ಯಾಂಶಗಳು

  • 20 ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿರುವ ಜೋಡಿ
  • ಗೌಡ್ರು ಚಿತ್ರವೇ ಕೊನೆಯದಾಗಿ ಕೆಲಸ ನಿರ್ವಹಿಸಿದ್ದ ಸಿನಿಮಾ
  • ಇದೇ 16 ಹೊಸ ಸಿನಿಮಾದ ಟೈಟಲ್ ಘೋಷಣೆ
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ ಎಸ್. ಮಹೇಂದರ್- ಸಂಗೀತ ನಿರ್ದೇಶಕ ಹಂಸಲೇಖ ಪ್ರೇಕ್ಷಕರ ಮೇಲೆ ಮೋಡಿ ಮಾಡಿದ ಜೋಡಿಗಳಲ್ಲಿ ಒಂದು. ‘ಶೃಂಗಾರ ಕಾವ್ಯ’, ‘ಕರ್ಪೂರದ ಗೊಂಬೆ’, ‘ತಾಯಿ ಇಲ್ಲದ ತವರು’, ‘ಕೌರವ’, ‘ಸ್ನೇಹಲೋಕ’ ಸೇರಿ ಸುಮಾರು 20 ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. 2004ರಲ್ಲಿ ತೆರೆಕಂಡಿದ್ದ ಅಂಬರೀಷ್ ಅಭಿನಯದ ‘ಗೌಡ್ರು’ ಈ ಜೋಡಿಯ ಕಾಂಬಿನೇಷನ್‌ನಲ್ಲಿ ಮೂಡಿಬಂದಿದ್ದ ಕೊನೆಯ ಚಿತ್ರ. ಇದೀಗ ಬರೋಬ್ಬರಿ 22 ವರ್ಷಗಳ ಬಳಿಕ ಇಬ್ಬರೂ ಹೊಸ ಚಿತ್ರದ ಮೂಲಕ ಒಂದಾಗುತ್ತಿದ್ದಾರೆ. ಇತ್ತೀಚೆಗೆಷ್ಟೇ ಸಿನಿಮಾ ಘೋಷಣೆ ಮಾಡಲಾಗಿದೆ. ಸದ್ಯ ಪ್ರಿ-ಪ್ರೊಡಕ್ಷನ್ ಕಾರ್ಯಗಳು ಭರದಿಂದ ಸಾಗಿದ್ದು, ಇದೇ ತಿಂಗಳ 16ರಂದು ಚಿತ್ರದ ಟೈಟಲ್ ಹಾಗೂ ಚಿತ್ರತಂಡವನ್ನು ಪರಿಚಯಿಸಲಿದ್ದಾರೆ. ನಿರ್ದೇಶಕ ಮಹೇಂದರ್, ‘ಇದೊಂದು ಮ್ಯೂಸಿಕಲ್ ಜಾನರ್ ಚಿತ್ರವಾಗಿದ್ದು, ಒಟ್ಟು ನಾಲ್ಕು ಹಾಡುಗಳಿರಲಿವೆ. ತುಂಬಾ ವರ್ಷಗಳ ಬಳಿಕ ಹಂಸಲೇಖ ಜತೆ ಕೆಲಸ ಮಾಡುತ್ತಿರುವುದಕ್ಕೆ ಖುಷಿಯಿದೆ. ಸದ್ಯ ಚಿತ್ರೀಕರಣಪೂರ್ವ ಕಾರ್ಯಗಳು ಸಾಗಿದ್ದು, ತಾರಾಗಣ ಹಾಗೂ ತಾಂತ್ರಿಕ ಬಳಗವನ್ನು ಶೀಘ್ರದಲ್ಲಿಯೇ ಪರಿಚಯಿಸಲಿದ್ದೇವೆ. ಕನ್ನಡ ಮಣ್ಣಿನ ನೆಲದ ಕಥೆಯನ್ನೇ ನಾವು ಹೇಳಲಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ. ಈ ಸೂಪರ್ ಹಿಟ್ ಕಾಂಬಿನೇಷನ್ ಸಿನಿಮಾಗೆ ಸುಮಾರು ಮೂರು ದಶಕಗಳಿಂದ ಚಿತ್ರರಂಗದ ಒಡನಾಡಿಯಾಗಿದ್ದಂತಹ, ಹಲವು ಸಿನಿಮಾಗಳಿಗೆ ಆರ್ಥಿಕವಾಗಿ ಬೆಂಬಲವಾಗಿ ಬೆನ್ನೆಲುಬಾಗಿ ನಿಂತಿದ್ದ ಕೆ.ಸಿ ವಿಜಯ್ ಕುಮಾರ್ ಬಂಡವಾಳ ಹೂಡುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net