ಧ್ರುವ ಸರ್ಜಾ ಹೊಸ ಕೆಮಿಸ್ಟ್ರಿ : 38ನೇ ಹುಟ್ಟುಹಬ್ಬಕ್ಕೆ ಎರಡು ಹೊಸ ಸಿನಿಮಾ ಘೋಷಿಸಿದ ಆ್ಯಕ್ಷನ್-ಪ್ರಿನ್ಸ್ dhruva sarja

ಹದಿನಾರು ವರ್ಷಗಳ ವೃತ್ತಿ ಜೀವನದಲ್ಲಿ ಬೆರಳಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ, ಸ್ಟಾರ್ ನಟರ ಸಾಲಿನಲ್ಲಿ ನಿಂತವರು ನಟ ಧ್ರುವ ಸರ್ಜಾ. ಸ್ಯಾಂಡಲ್‌ವುಡ್‌ನಲ್ಲಿ ಆ್ಯಕ್ಷನ್-ಪ್ರಿನ್ಸ್ ಎಂದೇ ಜನಪ್ರಿಯರಾಗಿರುವ ಅವರು ಮಂಗಳವಾರದಂದು 38ನೇ ಹುಟ್ಟುಹಬ್ಬವನ್ನು ಸಡಗರದಿಂದ ಆಚರಿಸಿಕೊಂಡಿದ್ದಾರೆ.
dhruva sarja announce new film
ಎರಡು ಸಿನಿಮಾ ಘೋಷಿಸಿದ ಧ್ರುವ ಸರ್ಜಾ
Published on: 

ಬೆಂಗಳೂರು: ಹದಿನಾರು ವರ್ಷಗಳ ವೃತ್ತಿ ಜೀವನದಲ್ಲಿ ಬೆರಳಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ, ಸ್ಟಾರ್ ನಟರ ಸಾಲಿನಲ್ಲಿ ನಿಂತವರು ನಟ ಧ್ರುವ ಸರ್ಜಾ. ಸ್ಯಾಂಡಲ್‌ವುಡ್‌ನಲ್ಲಿ ಆ್ಯಕ್ಷನ್-ಪ್ರಿನ್ಸ್ ಎಂದೇ ಜನಪ್ರಿಯರಾಗಿರುವ ಅವರು ಮಂಗಳವಾರ 38ನೇ ಹುಟ್ಟುಹಬ್ಬವನ್ನು ಸಡಗರದಿಂದ ಆಚರಿಸಿಕೊಂಡಿದ್ದಾರೆ. ಸೋಮವಾರ ರಾತ್ರಿಯೇ ತ್ಯಾಗರಾಜನಗರದ ನಟನ ನಿವಾಸದ ಮುಂದೆ ಮಳೆ ಲೆಕ್ಕಿಸದೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ನಟನನ್ನು ಭೇಟಿ ಮಾಡಿ, ಹುಟ್ಟುಹಬ್ಬದ ಶುಭ ಕೋರಿದರು. ಕೇಕ್ ಕತ್ತರಿಸಿ ಸಂಭ್ರಮಿಸಿದ ಧ್ರುವ, ಅಭಿಮಾನಿಗಳು ನೀಡಿದ ಕುರಿ, ಕರಿ ಕಂಬಳಿ ಉಡುಗೊರೆಯನ್ನು ಪಡೆದರು. ಬಳಿಕ ಮಾತನಾಡಿ ‘ಮಳೆಯನ್ನು ಲೆಕ್ಕಿಸದೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಬರ್ತ್‌ಡೇಗೆ ಶುಭಕೋರಿದ್ದಕ್ಕೆ ಧನ್ಯವಾದಗಳು. ಮುಂದೆ ಇದೇ ರೀತಿಯ ಸಹಕಾರ ಇರಲಿ’ ಎಂದು ಖುಷಿ ಹಂಚಿಕೊಂಡರು. ಇನ್ನು ಧ್ರುವ ಸರ್ಜಾ ‘ಕೆಮಿಸ್ಟ್ರಿ’ ಮತ್ತು ‘ವಸುದೈವ ಕುಟುಂಬಕಂ’ ಎಂಬ ಎರಡು ಹೊಸ ಸಿನಿಮಾಗಳನ್ನು ಘೋಷಿಸುವ ಮೂಲಕ ಜನ್ಮದಿನದ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದಾರೆ.

ಒಂದಾದ ‘ಪೊಗರು’ ಜೋಡಿ

‘ಪೊಗರು’ (2021) ಬಳಿಕ ನಟ ಧ್ರುವ ಸರ್ಜಾ-ನಂದ ಸುಧೀರ್ ಜೋಡಿಯಾಗಿ ಮತ್ತೊಮ್ಮೆ ಒಂದಾಗಿದೆ. ಇಬ್ಬರ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಅನೌನ್ಸ್ ಆಗಿದ್ದು, ‘ವಸುದೈವ ಕುಟುಂಬಕಂ’ ಎಂದು ಹೆಸರಿಡಲಾಗಿದೆ. ಆ ಮೂಲಕ ಧ್ರುವ ಸರ್ಜಾ ಆ್ಯಕ್ಷನ್ ಜಾನರ್‌ನಿಂದ ಫ್ಯಾಮಿಲಿ ಡ್ರಾಮಾ ಹಳಿಗೆ ಮರಳಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ‘ವಸುದೈವ ಕುಟುಂಬಕಂ’ನಲ್ಲಿ ಕುಟುಂಬ ಆಡಿಯನ್ಸ್‌ಗೆ ಇಷ್ಟವಾಗುವ ಲವ್, ಆ್ಯಕ್ಷನ್, ಸೆಂಟಿಮೆಂಟ್ ಅಂಶಗಳಿರಲಿವೆ. ವಿ.ಹರಿಕೃಷ್ಣ ಸಂಗೀತ, ಸತ್ಯ ಹೆಗ್ಡೆ ಛಾಯಾಗ್ರಹಣ ಚಿತ್ರಕ್ಕಿರಲಿದೆ. ಸಿನಿಮಾದಲ್ಲಿ ಬಹುತಾರಾಗಣ ಇರಲಿದ್ದು, ಆ ಬಗ್ಗೆ ಮುಂದಿನ ದಿನಗಳಲ್ಲಿ ಚಿತ್ರತಂಡ ಮಾಹಿತಿ ನೀಡಲಿದೆ. ನಿರ್ದೇಶಕ ನಂದಕಿಶೋರ್ ಈ ಚಿತ್ರದ ಮೂಲಕ ನಂದ ಸುಧೀರ್ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ. ಧ್ರುವ ಸರ್ಜಾ ಸದ್ಯ ‘ಕ್ರಿಮಿನಲ್’ನಲ್ಲಿ ಅಭಿನಯಿಸುತ್ತಿದ್ದು, ಶೂಟಿಂಗ್ ಹಂತದಲ್ಲಿದೆ.

ನಭಾ ಜತೆ ‘ಬಹದ್ದೂರ್’ ರೊಮ್ಯಾನ್ಸ್!

ಧ್ರುವ ಸರ್ಜಾ ಮಾಸ್ ಇಮೇಜ್‌ನಿಂದ ಹೊರಬಂದು ‘ಕೆಮಿಸ್ಟ್ರಿ’ ಚಿತ್ರದ ಮೂಲಕ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಇದೊಂದು ಲವ್‌ಸ್ಟೋರಿಯಾಗಿದ್ದು, ಧ್ರುವ ಜತೆ ನಭಾ ನಟೇಶ್ ಅಭಿನಯಿಸುತ್ತಿದ್ದಾರೆ. ಆ ಮೂಲಕ 9 ವರ್ಷಗಳ ಬಳಿಕ ‘ವಜ್ರಕಾಯ’ ನಟಿ ಸ್ಯಾಂಡಲ್‌ವುಡ್ ಮರಳುತ್ತಿದ್ದಾರೆ. ಈ ಚಿತ್ರಕ್ಕೆ ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ ಬಂಡವಾಳ ಹೂಡುತ್ತಿದ್ದು, ‘ತತ್ಸಮ-ತದ್ಭವ’ ಖ್ಯಾತಿಯ ವಿಶಾಲ್ ಆತ್ರೇಯ ನಿರ್ದೇಶಿಸುತ್ತಿದ್ದಾರೆ. ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವಂತ ಕೌಟುಂಬಿಕ ಬಾಂಧವ್ಯ ಮತ್ತು ಲವ್ ಸ್ಟೋರಿ ಈ ಚಿತ್ರದ ಪ್ರಮುಖ ಆಕರ್ಷಣೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net