ರಮೇಶ್ ಅರವಿಂದ ಅಭಿನಯದ 106ನೇ ಸಿನಿಮಾ ‘ದೈಜಿ’ ತೆರೆಗೆ ಬರಲು ಸಿದ್ಧ DAIJI

ರಮೇಶ್ ಅರವಿಂದ ಅಭಿನಯದ 106ನೇ ಸಿನಿಮಾ ‘ದೈಜಿ’. ಆಕಾಶ್ ಶ್ರೀವತ್ಸ ನಿರ್ದೇಶನದ ಈ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್-ಪ್ರೊಡಕ್ಷನ್ ಕಾರ್ಯಗಳು ಭರದಿಂದ ಸಾಗಿವೆ. ಶೀಘ್ರವೇ ಚಿತ್ರತಂಡ ರಿಲೀಸ್ ಡೇಟ್ ಅನೌನ್ಸ್ ಮಾಡಲು ಸಿದ್ಧತೆ ನಡೆಸುತ್ತಿದೆ.
DAIJI POSTER
ದೈಜಿ ಪೋಸ್ಟರ್​
Published on: 

ಬೆಂಗಳೂರು: ರಮೇಶ್ ಅರವಿಂದ ಅಭಿನಯದ 106ನೇ ಸಿನಿಮಾ ‘ದೈಜಿ’. ಆಕಾಶ್ ಶ್ರೀವತ್ಸ ನಿರ್ದೇಶನದ ಈ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್-ಪ್ರೊಡಕ್ಷನ್ ಕಾರ್ಯಗಳು ಭರದಿಂದ ಸಾಗಿವೆ. ಶೀಘ್ರವೇ ಚಿತ್ರತಂಡ ರಿಲೀಸ್ ಡೇಟ್ ಅನೌನ್ಸ್ ಮಾಡಲು ಸಿದ್ಧತೆ ನಡೆಸುತ್ತಿದೆ. ಹೀಗಿರುವಾಗಲೇ, ಚಿತ್ರದ ಕುರಿತಂತೆ ಆಸಕ್ತಕರವಾದ ಮಾಹಿತಿ ಹೊರಬಿದ್ದಿದೆ. ‘ದೈಜಿ’ ಚಿತ್ರಕ್ಕೆ ಮೂವರು ಸಂಗೀತ ನಿರ್ದೇಶಕರು ಕೆಲಸ ಮಾಡಿರುವುದು ವಿಶೇಷ. ಸಾಮಾನ್ಯವಾಗಿ ಕನ್ನಡ ಸಿನಿಮಾಗಳಲ್ಲಿ ಒಬ್ಬರು ಅಥವಾ ಇಬ್ಬರು ಸಂಗೀತ ನಿರ್ದೇಶನ ಮಾಡಿರುವುದು ಇದೆ. ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರಕ್ಕೆ ಕೂಡ ಮೂವರು ಸಂಗೀತ ನಿರ್ದೇಶಕರು ಕೆಲಸ ಮಾಡಿದ್ದರು. ಅದರ ಬೆನ್ನಲ್ಲೇ ಇದೀಗ ‘ದೈಜಿ’ ಚಿತ್ರದಲ್ಲಿ ಜೂಡಾ ಸ್ಯಾಂಡಿ, ಸಚಿನ್ ಬಸ್ರೂರು, ನಕುಲ್ ಅಭಯಂಕರ್‌ರ ಸಂಗೀತಕ್ಕಾಗಿ ಕೆಲಸ ಮಾಡಿದ್ದಾರೆ. ಹಾರರ್ ಹಿನ್ನೆಲೆ ಸಂಗೀತ ಜತೆಗೆ ಒಂದು ಇಂಗ್ಲೀಷ್ ಹಾಡಿಗೆ ಜ್ಯೂಡಾ ಸಂಗೀತ ಸಂಯೋಜಿಸಿದ್ದಾರೆ. ಈ ಹಾಡನ್ನು ನಿರ್ಮಾಪಕ ರವಿ ಕಶ್ಯಪ್ ಪುತ್ರಿ ವಿಭಾ ಹಾಡಿರುವುದು ವಿಶೇಷ. ನಟ ಡಾಲಿ ಧನಂಜಯ್ ಬರೆದ ಎರಡು ಹಾಡುಗಳಿಗೆ ನಕುಲ್ ಅಭಯಂಕರ್ ಸಂಗೀತ ನೀಡಿದ್ದಾರೆ. ಜತೆಗೆ ಸಚಿನ್ ಬಸ್ರೂರು ಸಂಗೀತ ಕೂಡ ಸಿನಿಮಾದಲ್ಲಿ ಕೇಳಬಹುದು. ಚಿತ್ರದ ಹಾಡುಗಳಿಗೆ ಹಿರಿಯ ಗಾಯಕ ಸೋನು ನಿಗಮ್, ‘ಕಾಂತಾರ’ ಖ್ಯಾತಿಯ ಅಬ್ಬಿ, ಸಂಸದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದ, ಹರ್ಷ ಧ್ವನಿಯಾಗಿದ್ದಾರೆ. ಇನ್ನು ರಮೇಶ್ ಅರವಿಂದ ಜತೆಗೆ ರಾಧಿಕಾ ನಾರಾಯಣ್, ಅವಿನಾಶ್, ದಿಗಂತ್, ಬಿ.ಎಂ.ಗಿರಿರಾಜ್, ವಿದೇಶಿ ಕಲಾವಿದರಾದ ಅಲೆಕ್ಸಾಂಡರ್ ಟೈಲರ್, ಸ್ಯಾಂಡಿ ಹಿಗಿನ್ಸ್ ತಾರಾಗಣದಲ್ಲಿದ್ದಾರೆ.

ಸದ್ಯ ಚಿತ್ರದ ಅಂತಿಮ ಹಂತದ ಸೌಂಡ್ ಮಿಕ್ಸಿಂಗ್ ಮತ್ತು ವಿಎಫ್​ಎಕ್ಸ್ ಕೆಲಸಗಳು ನಡೆಯುತ್ತಿವೆ. ಎಲ್ಲ ತಾಂತ್ರಿಕ ಕೆಲಸಗಳು ಪೂರ್ಣಗೊಂಡ ಬಳಿಕ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಲು ಚಿತ್ರತಂಡ ಯೋಜಿಸಿದೆ. ವಿಭಿನ್ನ ಕಥಾವಸ್ತು, ಅಂತರಾಷ್ಟ್ರೀಯ ಕಲಾವಿದರ ಬಳಗ, ಖ್ಯಾತ ಗಾಯಕರ ಗಾಯನ ಹಾಗೂ ಹಾಲಿವುಡ್ ಶೈಲಿಯ ಧ್ವನಿ ವಿನ್ಯಾಸದೊಂದಿಗೆ ‘ದೈಜಿ’ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗೆ ವಿಶಿಷ್ಟ ಅನುಭವ ನೀಡಲಿದೆ.
ಅಕಾಶ್ ಶ್ರೀವತ್ಸ, ನಿರ್ದೇಶಕ