ಬೆಂಗಳೂರು: ‘ಜಟ್ಟ’, ‘ಮೈತ್ರಿ’ ಖ್ಯಾತಿಯ ಬಿ.ಎಂ.ಗಿರಿರಾಜ್ ಡಬಲ್ ಸಂಭ್ರಮದಲ್ಲಿದ್ದಾರೆ. ಅವರು ಆ್ಯಕ್ಷನ್-ಕಟ್ ಹೇಳಿರುವ ಎರಡು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ಗೆ ಸಿದ್ಧವಾಗಿವೆ. ‘ರಾಮರಸ’ ಡಿ. 11ಕ್ಕೆ ತೆರೆಗೆ ಬರಲಿದ್ದು, ಅದರ ಬೆನ್ನಲ್ಲೇ ಮತ್ತೊಂದು ಸಿನಿಮಾ ‘ಕಲ್ಯಾಣಿ’ ಕೂಡ ರಿಲೀಸ್ಗೆ ರೆಡಿಯಾಗಿದೆ. ಲೇಖಕ ಬಸವ ರೆಡ್ಡಿ ಕಥೆಗೆ ಗಿರಿರಾಜ್ ‘ಕಲ್ಯಾಣಿ’ ಹೆಸರಿನಲ್ಲಿ ಸಿನಿಮಾ ರೂಪ ನೀಡಿದ್ದಾರೆ. ಈಗಾಗಲೇ ಸದ್ದಿಲ್ಲದೇ ಚಿತ್ರೀಕರಣ ಪೂರ್ಣಗೊಳಿಸಿರುವ ಗಿರಿರಾಜ್ ಮತ್ತು ತಂಡ ಸದ್ಯ ಪೋಸ್ಟ್-ಪ್ರೊಡಕ್ಷನ್ನಲ್ಲಿದ್ದು, ಶೀಘ್ರವೇ ಸಿನಿಮಾ ರಿಲೀಸ್ ಮಾಡಲು ಸಿದ್ಧತೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಚಿತ್ರತಂಡ ಆಡಿಯೋ ಬಿಡುಗಡೆ ಮಾಡಿತು. ಬಳಿಕ ಗಿರಿರಾಜ್, ‘‘ಕಲ್ಯಾಣಿ’ ನವಿರಾದ ಒಲವಿನ ಕಥೆ. ನಂಬಿಕೆ, ಸ್ನೇಹ, ಐಡೆಂಟಿಟಿಯ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ. ಎರಡು ಭಿನ್ನ ಸಂಸ್ಕೃತಿಗಳು ಮುಖಾಮುಖಿಯಾಗಲಿದ್ದು, ಉತ್ತರ ಭಾರತದ ಹುಡುಗಿ ಹಾಗೂ ದಕ್ಷಿಣ ಭಾರತದ ಹುಡುಗನ ಮಧ್ಯೆ ಕಥೆ ಸಾಗುತ್ತದೆ. ಇಲ್ಲಿಯವರೆಗೆ ನಾನು ಮಾಡಿರುವ ಸಿನಿಮಾಗಳಿಗಿಂತ ಇದು ಸಂಪೂರ್ಣ ವಿಭಿನ್ನವಾಗಿದೆ’ ಎಂದರು. ರಂಗಭೂಮಿ ಹಿನ್ನೆಲೆಯ ಸಾಮ್ರಾಟ್ ಶೆಟ್ಟಿ ನಾಯಕನಾಗಿದ್ದು, ಉತ್ತರ ಭಾರತದ ಹುಡುಗಿಯಾಗಿ ಸಿಮ್ರನ್ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ರಾಹುಲ್ ಜೇಟ್ಲಿ, ಶಮಂತ್ ರಾವ್, ಪಿ.ಡಿ. ಸತೀಶ್ ಚಂದ್ರ, ಯಮುನಾ ಶ್ರೀನಿಧಿ, ವಿಜಯ್ ಚೆಂಡೂರು, ಶೈಲೇಂದ್ರ ಕಲಾಬಳಗದಲ್ಲಿದ್ದಾರೆ. ಬಿ.ಜೆ. ಭರತ್ ಸಂಗೀತ ಚಿತ್ರಕ್ಕಿದೆ. ಭಟ್ಕಳ, ಉಡುಪಿ, ಬೆಂಗಳೂರು ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ.