ಮೊದಲು ಜಾಹ್ನವಿ ಎನ್ನುತ್ತಿದ್ದರು, ಇದೀಗ ಎಲ್ಲೆಡೆ ‘ಬಿಗ್‌ಬಾಸ್ ಜಾಹ್ನವಿ’ ಎಂದು ಕರೆಯುತ್ತಿದ್ದಾರೆ. ಮೊದಲು ಪ್ರತಿಭೆ ಗುರುತಿಸಿದ್ದ ಜನ, ಬಿಗ್‌ಬಾಸ್ ಆಟದಲ್ಲಿ ನನ್ನ ವ್ಯಕ್ತಿತ್ವವನ್ನು ಗುರುತಿಸಿ, ಪ್ರೀತಿ ನೀಡಿದ್ದಾರೆ. ‘ಬಿಗ್‌ಬಾಸ್’ ಮನರಂಜನೆಯ ಆಟವಷ್ಟೇ. ಅಲ್ಲಿಂದ ನಾನು ಹಲವು ನೆನಪುಗಳನ್ನು ತಂದಿದ್ದೇನೆ. ಜೀವನವೇ ನನಗೆ ಹೆಚ್ಚು ಪಾಠ ಕಲಿಸಿದ್ದರಿಂದ ‘ದೊಡ್ಮನೆ’ಯಿಂದ ಇಂತಹ ವಿಚಾರ ಕಲಿತಿದ್ದೇನೆ ಎಂಬುದೇನೂ ಇಲ್ಲ. ಜರ್ನಿಯನ್ನು ಎಂಜಾಯ್ ಮಾಡಿದ್ದೇನೆ. ಇನ್ನುಮುಂದೆ ಹೆಚ್ಚು ವಿಧೇಯಳಾಗಿರಬೇಕು, ಯಾವುದಕ್ಕೂ ರಾಜೀ ಆಗದೇ ವ್ಯಕ್ತಿಗತ ಗೌರವದಿಂದ ಮುನ್ನಡೆಯಬೇಕು ಹಾಗೂ ಕೆಲಸಕ್ಕಾಗಿ ಶೇ.100 ರಷ್ಟು ಪರಿಶ್ರಮ ಹಾಕಬೇಕು- ಇವು ಈ ಬಾರಿ ಸಂಕ್ರಾಂತಿ ಹಬ್ಬದಲ್ಲಿ ನಾನು ತೆಗೆದುಕೊಂಡಿರುವ ನಿರ್ಧಾರಗಳು. ಮಗ ಮತ್ತು ನಾನು ಇಬ್ಬರೂ ಮನೆಯಲ್ಲೇ ಹಬ್ಬ ಆಚರಿಸಲಿದ್ದೇವೆ. ಹೊಸ ಬಟ್ಟೆ ಧರಿಸಿ, ಮನೆಯಲ್ಲಿ ಪೂಜೆ ಮಾಡಿ ನಂತರ ದೇವಸ್ಥಾನಕ್ಕೆ ತೆರಳುತ್ತೇವೆ. ಕಬ್ಬು, ಅವರೇಕಾಯಿ ಖರೀದಿಸಿದ್ದೇವೆ. ‘ಬಿಗ್‌ಬಾಸ್’ನಿಂದ ಬಂದಿರುವ ಕಾರಣ ಹಬ್ಬದ ಖುಷಿ ಹೆಚ್ಚಿರಲಿದೆ. ಹೊಸ ಸಿನಿಮಾ ಸದ್ಯದಲ್ಲೇ ಘೋಷಣೆಯಾಗಲಿದ್ದು, ಅದರಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಕನ್ನಡದ ‘ಯುವ ರಾಬಿನ್‌ಹುಡ್’ ಸಿನಿಮಾ ಅಂತಿಮ ಹಂತದಲ್ಲಿದೆ. ಅದು ಈ ವರ್ಷ ರಿಲೀಸ್ ಆಗಲಿದೆ. ಎಲ್ಲ ಏಳು-ಬೀಳುಗಳಿಗೆ ಇಂದಿನಿಂದಲೇ ಫುಲ್‌ಸ್ಟಾಪ್ ಇಟ್ಟು, ಅಮ್ಮ, ಮಗನ ಜತೆ ಜೀವನವನ್ನು ಎಂಜಾಯ್ ಮಾಡುತ್ತೇನೆ.