ಅಪಹರಣ, ವ್ಯವಸ್ಥಿತ ಮಾಫಿಯಾ ಸೇರಿ ಇತರೆ ಕ್ರೈಮ್‌ಗಳ ಕುರಿತು ಹಲವು ಸಿನಿಮಾಗಳು ಬಂದಿವೆ. ಆ ಸಾಲಿಗೆ ‘ಬೆಂಗಳೂರು ಇನ್’ ಒಂದು ಸೇರ್ಪಡೆಯಷ್ಟೇ. ಕಾರ್ತಿಕ್ ಮೂರ್ತಿ ಸಿದ್ಧ ಮಾದರಿಯಲ್ಲಿ ಈ ಕಮರ್ಷಿಯಲ್ ಕಥೆ ನಿರೂಪಿಸಿದ್ದಾರೆ. ಇನ್ನೊಂದಿಷ್ಟು ಅಧ್ಯಯನ, ತಯಾರಿ ಬೇಕಿತ್ತು. ಮೊದಲರ್ಧ ರಾಮು ಕಥೆ ಹೇಳಿದರೆ, ದ್ವಿತೀಯಾರ್ಧದಲ್ಲಿ ಸೂರ್ಯನ ಕಥೆ ಹೇಳಿದ್ದಾರೆ. ಇಬ್ಬರ ಕಥೆಯನ್ನು ಜೋಡಿಸಲು ಇನ್ನೊಂದಿಷ್ಟು ಕೆಲಸ ಮಾಡಬೇಕಿತ್ತು. ಧರ್ಮ ಕೀರ್ತಿರಾಜ್ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದು, ಗಮನ ಸೆಳೆಯುತ್ತಾರೆ. ಪತ್ರಕರ್ತೆಯಾಗಿ ಅನುಷಾ ರೈ ಮಿಂಚಿದ್ದು, ರಿಷಾ ಗೌಡ ಪಾತ್ರಕ್ಕೆ ಮಾತಿಗಿಂತ ಗ್ಲಾಮರ್ ಲುಕ್ ನೀಡಲಾಗಿದೆ. ಮಂಜು ಪಾವಗಡ, ಬಲ ರಾಜವಾಡಿ, ಶಶಿಕುಮಾರ್ ಕೊಟ್ಟ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ.