ನಿರ್ಮಾಪಕ ವೆಂಕಟ್ ಕೆ. ನಾರಾಯಣ್ ಅವರ ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಸದ್ಯ ಮೂರು ನಿರೀತ ಚಿತ್ರಗಳು ರೆಡಿಯಾಗುತ್ತಿವೆ. ಅದರಲ್ಲೊಂದು ಧ್ರುವ ಸರ್ಜಾ ಮತ್ತು ನಿರ್ದೇಶಕ ಪ್ರೇಮ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ "ಕೆಡಿ & ದ ಡೆವಿಲ್'. ಮತ್ತೊಂದು ತಮಿಳು ನಟ ವಿಜಯ್ ನಟಿಸಿರುವ "ಜನನಾಯಗನ್' ಹಾಗೂ ಇನ್ನೊಂದು ಗೀತು ಮೋಹನದಾಸ್ ನಿರ್ದೇಶನದಲ್ಲಿ ಯಶ್ ನಟಿಸುತ್ತಿರುವ ಪ್ಯಾನ್ ವರ್ಲ್ಡ್ "ಟಾಕ್ಸಿಕ್'. ಈ ಮೂರು ಚಿತ್ರಗಳಿಂದ ಬರೋಬ್ಬರಿ <1000 ಕೋಟಿ ಹಣ ಪಣದಲ್ಲಿದೆ ಎನ್ನಲಾಗಿದೆ. ಜತೆಗೆ ಮೂರು ಚಿತ್ರಗಳ ಬಿಡುಗಡೆಯಗೂ ವಿವಿಧ ಕಾರಣಗಳಿಂದ ತಡವಾಗಿರುವ ಕಾರಣ, ನಿರ್ಮಾಣ ಸಂಸ್ಥೆಗೂ ತಲೆಬಿಸಿಯಾಗಿತ್ತು. ಆದರೆ, ಇದೀಗ "ಕೆಡಿ' ಇದೇ ಗುರುವಾರ (ಏ.30) ತೆರೆಗೆ ಬರಲಿದ್ದು, ಅದರ ನಡುವೆಯೇ ಕೆವಿಎನ್ ಸಂಸ್ಥೆ ನಿರ್ಮಿಸುತ್ತಿರುವ ನಾಲ್ಕನೇ ಸಿನಿಮಾ ಅಪ್ಡೇಟ್ ದೊರೆತಿದೆ. ಹೌದು, ಕಳೆದ ಆಗಸ್ಟ್ನಲ್ಲಿ ಶಿವರಾಜಕುಮಾರ್ ಮತ್ತು ಪವನ್ ಒಡೆಯರ್ ಕಾಂಬಿನೇಷನ್ನಲ್ಲಿ ಹೊಸ ಸಿನಿಮಾ ಮುಹೂರ್ತ ನೆರವೇರಿತ್ತು. ಅದಕ್ಕೆ "ಬೇಲ್' ಎಂದು ಟೈಟಲ್ ಫಿಕ್ಸ್ ಎಂಬ ಸುದ್ದಿ ಗಾಂಧಿನಗರದಲ್ಲಿ ಗರಿಬಿಚ್ಚಿತ್ತಾದರೂ, ಚಿತ್ರತಂಡ ಅಧಿಕೃತವಾಗಿ ಘೋಷಿಸಿರಲಿಲ್ಲ. ಇದೀಗ ಡಾ. ರಾಜಕುಮಾರ್ ಅವರ 97ನೇ ಜಯಂತಿಯಂದು ಟೈಟಲ್ ಜತೆಗೆ ಶಿವರಾಜಕುಮಾರ್ ಲುಕ್ ಕೂಡ ರಿವೀಲ್ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಕೆವಿಎನ್ ಪ್ರೊಡಕ್ಷನ್ಸ್, ಶಿವರಾಜಕುಮಾರ್ ಮತ್ತು ಪವನ್ ಒಡೆಯರ್ ಕೈಜೋಡಿಸಿದ್ದು, "ಬೇಲ್' ಬಗ್ಗೆ ಕುತೂಹಲ ಹೆಚ್ಚಿಸಿದೆ. ನಿರ್ಮಾಪಕ ವೆಂಕಟ್ ಕೆ. ನಾರಾಯಣ್, ""ಬೇಲ್' ನಮಗೆ ಬಹಳ ವಿಶೇಷವಾದ ಯೋಜನೆ. ಪವನ್ ಒಡೆಯರ್ ಅವರಂತಹ ಉತ್ತಮ ನಿರ್ದೇಶಕರ ಜತೆ ಕೈಜೋಡಿಸುವುದು, ಶಿವಣ್ಣ ಅವರಂತಹ ಐಕಾನ್ ಜತೆ ಕೆಲಸ ಮಾಡುವುದು ನಮ್ಮ ಗೌರವ' ಎನ್ನುತ್ತಾರೆ.