Bail Review - ಬೇಲ್ ಪಡೆಯುವ "ಕ್ರಿಮಿ'ನಲ್ಗಳ ಶಿಕಾರಿಯ ಸುತ್ತ
Bail Review - ಬೇಲ್ ಪಡೆಯುವ "ಕ್ರಿಮಿ'ನಲ್ಗಳ ಶಿಕಾರಿಯ ಸುತ್ತ (3.5 / 5)
ಚಿತ್ರ: ಬೇಲ್
ನಿರ್ದೇಶನ: ಪವನ್ ಒಡೆಯರ್
ನಿರ್ಮಾಣ: ಕೆವಿಎನ್ ಪ್ರೊಡಕ್ಷನ್ಸ್
ತಾರಾಗಣ: ಶಿವರಾಜಕುಮಾರ್, ಸಾಯಿಕುಮಾರ್, ಜಯರಾಮ್, ಸಂಜನಾ ಆನಂದ್, ದೀತ್ ಶೆಟ್ಟಿ, ರಮೇಶ್ ಇಂದಿರಾ, ಸಂಗೀತಾ ಮತ್ತಿತರರು
| ಹರ್ಷವರ್ಧನ್ ಬ್ಯಾಡನೂರು
"ಹುಷಾರಾದ್ಮೇಲೆ ಮೊದಲಿಗಿಂತ ಸ್ಪೀಡ್ ಆಗಿಬಿಟ್ಟಿದ್ದೀಯಾ!' ಎಂದು ನಿವೃತ್ತ ಐಪಿಎಸ್ ಅಧಿಕಾರಿ ವಿಜಯ್ ಕುಮಾರ್ರನ್ನು (ಶಿವರಾಜಕುಮಾರ್) ಕೇಳುತ್ತಾರೆ, ಗೆಳೆಯ ರಾರ್ಬಟ್ (ಜಯರಾಮ್). ಅದು ನಿಜವೂ ಹೌದು. ಶಿವಣ್ಣ ಅಮೆರಿಕದಲ್ಲಿ ಕ್ಯಾನ್ಸರ್ಗೆ ಚಿಕಿತ್ಸೆ ಪಡೆದು ವಾಪಸ್ಸಾದ ಬಳಿಕ ಪೂರ್ಣಪ್ರಮಾಣದಲ್ಲಿ ನಾಯಕನಾಗಿ ನಟಿಸಿರುವ ಚಿತ್ರ "ಬೇಲ್'. ಹೀಗಾಗಿ ಅವರ ನೈಜ ಜೀವನಕ್ಕೆ ಹೊಂದುವ ಕೆಲ ಸಂಭಾಷಣೆಗಳನ್ನು ಈ ಸಿನಿಮಾದಲ್ಲಿ ನೋಡಬಹುದು. ಇಲ್ಲಿ ಶಿವಣ್ಣ ಹೆಚ್ಚು ಡಾನ್ಸ್ ಅಥವಾ ಫೈಟ್ಸ್ ಮಾಡದಿರಬಹುದು. ಆದರೆ, ಅವರ ಸ್ಟೈಲ್, ಸ್ವ್ಯಾಗ್, ಡೈಲಾಗ್ ಡೆಲಿವರಿಯನ್ನು ಹರಿತವಾಗಿಸುವ ಮೂಲಕ ಪವನ್ ಸರಿದೂಗಿಸಿದ್ದಾರೆ. ಹಾಗಾದರೆ ಹೇಗಿದೆ "ಬೇಲ್'?
ಅದು ಬೆಂಗಳೂರಿನ ಪ್ರತಿಷ್ಠಿತ ಸ್ವರಾಜ್ ಲಕ್ಷುರಿ ಇಂಟರ್ನ್ಯಾಷನಲ್ ಹೋಟೆಲ್. ಅದರ ಮೇಲೆ ಉಗ್ರರು ದಾಳಿ ನಡೆಸುತ್ತಾರೆ. ಅವರಿಗೆ ಬಲಿಯಾಗುವ ನೂರಾರು ಜನರಲ್ಲಿ ಹೋಟೆಲ್ ಮ್ಯಾನೇಜರ್ ಕೃತಿ ಕೂಡ ಒಬ್ಬಳು. ಅದಾಗಿ ಒಂದು ವರ್ಷಕ್ಕೆ ಪೊಲೀಸ್ ಕಮಿಷನರ್ ಹುದ್ದೆಯಿಂದ ಐಪಿಎಸ್ ಅಧಿಕಾರಿ ವಿಜಯ್ ಕುಮಾರ್ ನಿವೃತ್ತಿ ಹೊಂದುತ್ತಾರೆ. "ಮೈಮೇಲೆ ಒಂದೂ ಗಾಯವಿಲ್ಲದೇ, ಒಂದು ಕೇಸ್ ಕೂಡ ಸಾಲ್ವ್ ಮಾಡದೇ ರಿಟೈರ್ಡ್ ಆದ ಅದೃಷ್ಟವಂತ ಅಧಿಕಾರಿ'. ಕಾರಣ ವಿಜಯ್, ಮಿನಿಸ್ಟರ್ ಮಗಳು ಹಾಸಿನಿಯನ್ನು (ಸಂಗೀತಾ) ಮದುವೆಯಾಗಿರುತ್ತಾರೆ. ವಿಜಯ್ ರಿಟೈರ್ಡ್ ಆದ ಕೆಲ ದಿನಗಳಲ್ಲೇ ಸ್ವರಾಜ್ ಹೋಟೆಲ್ ದಾಳಿಯ ರೂವಾರಿ ಸಾಜಿದ್ ಖುರೇಷಿಗೆ ಬೇಲ್ ದೊರೆಯುತ್ತದೆ. ಮಗಳು ಕೃತಿಯೂ ಸೇರಿ ನೂರಾರು ಜನರನ್ನು ಕೊಂದು ಇಷ್ಟು ಸಲೀಸಾಗಿ ಜೈಲಿನಿಂದ ಹೊರಬಂದುಬಿಟ್ಟನಲ್ಲಾ... ವಿಜಯ್ ಒಳಗೆ ಹೋರಾಟದ ಕಿಚ್ಚು ಹೊತ್ತಿಕೊಳ್ಳುತ್ತದೆ. ಗೆಳೆಯರಾದ ರಿಟೈರ್ಡ್ ವಿಜ್ಞಾನಿ ರಾರ್ಬಟ್, ನಿವೃತ್ತ ಜಡ್ಜ್ ಅಲಿ (ಸಾಯಿಕುಮಾರ್), ಹಾಗೂ "ಕಣ್ಣಿಗೆ ಕಾಣಿಸದ ನಾಲ್ಕನೇ ಸಿಂಹದ' ಜತೆ ಸೇರಿ ಬೇಲ್ ಪಡೆದು ಹೊರಬರುವ ಕಿರಾತಕರ ಶಿಕಾರಿಗಿಳಿಯುತ್ತಾರೆ. ಮುಂದೆ ಇವರು ಬೇಟೆಯಾಡುತ್ತಾರಾ? ಅಥವಾ ಬೇಟೆಯಾಗುತ್ತಾರಾ? ಎಂಬುದೇ "ಬೇಲ್'.
ನಿರ್ದೇಶಕ ಪವನ್ ಒಡೆಯರ್ ಈ ಕಥೆಯನ್ನು ಆರು ಚಾಪ್ಟರ್ಗಳಲ್ಲಿ ಹೇಳಿದ್ದಾರೆ. ಗಂಭೀರವಾಗಿ ಸಾಗುತ್ತಿರುವ ಕಥೆಯಲ್ಲಿ ಜಯರಾಮ್ ತುಂಟುತನ, ಸಾಯಿಕುಮಾರ್ ಅಸಹಾಯಕತೆ ಪ್ರೇಕ್ಷಕರನ್ನು ನಗಿಸುತ್ತಿರುತ್ತದೆ. ಚಿತ್ರದಾದ್ಯಂತ ಟ್ವಿಸ್ಟ್, ರ್ಟನ್ಗಳಿವೆ. ಜತೆಗೆ ಓಪನ್ ಎಂಡಿಂಗ್ ಕೊಟ್ಟಿರುವ ಕಾರಣ ಎರಡನೇ ಭಾಗವನ್ನೂ ನಿರೀಸಬಹುದು. ಶಿವಣ್ಣ ಒನ್ಲೈನರ್ಗಳು ಚಿತ್ರದ ಹೈಲೈಟ್. ಶಿವಣ್ಣ, ಜಯರಾಮ್, ಸಾಯಿಕುಮಾರ್ ಜತೆ ಲೂಸ್ ಮಾದ ಯೋಗಿ, ರಮೇಶ್ ಇಂದಿರಾ, ದೀತ್ ಶೆಟ್ಟಿ ನಟನೆ ಗಮನ ಸೆಳೆಯುತ್ತದೆ. ಕೆಲವೆಡೆ ವಿಎಫ್ಎಕ್ಸ್ ಪರಿಣಾಮಕಾರಿಯಾಗಿ ಇಲ್ಲವಾದರೂ ವೈದಿ ಛಾಯಾಗ್ರಹಣ ಅಚ್ಚುಕಟ್ಟಾಗಿ ಮೂಡಿಬಂದಿದೆ. ಅಜನೀಷ್ ಲೋಕನಾಥ್ ಮಾಸ್ ಹಿನ್ನೆಲೆ ಸಂಗೀತ ಪ್ಲಸ್ ಆಗಿದೆ. ಒಟ್ಟಾರೆ ಶಿವಣ್ಣ ಅಭಿಮಾನಿಗಳಿಗೆ ಮಸಾಲಾ "ಬೇಲ್' ಪುರಿಯಷ್ಟೇ ರುಚಿಕರ ಚಿತ್ರವಿದು!
