ರಾಜ್ ಬಿ. ಶೆಟ್ಟಿ ನಟಿಸಿದ್ದ, ರವಿ ಸಾರಂಗ್ ಚೊಚ್ಚಲ ಬಾರಿಗೆ ನಿರ್ದೇಶಿಸಿದ್ದ ಮರ್ಡರ್ ಮಿಸ್ಟರಿ "ರಕ್ಕಸಪುರದೋಳ್'. ಕಳೆದ ಫೆ. 6ರಂದು ಬಿಡುಗಡೆಯಾದ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಕೂಡ ಟ್ರೇಲರ್ ನೋಡಿ ಮಿಚ್ಚು, ಹಿಂದಿಗೆ ಸಿನಿಮಾ ಡಬ್ ಮಾಡುವಂತೆ ಸಲಹೆ ನೀಡಿದ್ದರು. ಕರ್ನಾಟಕ ಪಾತ್ರವಲ್ಲದೇ ಹೊರದೇಶಗಳಲ್ಲೂ ಕನ್ನಡಿಗರನ್ನು ರಂಜಿಸಿದ್ದ "ರಕ್ಕಸಪುರದೋಳ್' ಇತ್ತೀಚೆಗಷ್ಟೆ 50 ಸೆಂಟರ್ಗಳಲ್ಲಿ 25 ದಿನಗಳನ್ನು ಪೂರೈಸಿದೆ. ಈ ಚಿತ್ರ ಬಿಡುಗಡೆವರೆಗೂ ಟ್ರೇಲರ್, ಹಾಡುಗಳನ್ನು ನೋಡಿ ನಟ ರಾಜ್ ಬಿ. ಶೆಟ್ಟಿ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿದ್ದವು. ಆದರೆ, ರಿಲೀಸ್ ಬಳಿಕ ನಟ ಅನಿರುದ್ಧ್ ಭಟ್ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇದೇ ಖುಷಿಯಲ್ಲಿ ವಿಜಯವಾಣಿ ಜತೆ ಅನಿರುದ್ಧ್ ಮಾತಿಗೆ ಸಿಕ್ಕಿದ್ದರು. "ಹೊಯ್ಸಳ', "ಇಬ್ಬನಿ ತಬ್ಬಿದ ಇಳೆಯಲಿ', "ಮ್ಯಾಕ್ಸ್' ಚಿತ್ರಗಳಲ್ಲೂ ಬಹುತೇಕ ನೆಗಟಿವ್ ಶೇಡ್ಗಳಲ್ಲಿ ನಟಿಸಿರುವ ಅವರು, "ರಕ್ಕಸಪುರದೋಳ್'ನಲ್ಲಿ ಔಟ್ ಆ್ಯಂಡ್ ಔಟ್ ಟೆರರ್ ಪಾತ್ರದಲ್ಲಿ ಅಬ್ಬರಿಸಿದ್ದಾರೆ. "ಸಿನಿಮಾ ರಿಲೀಸ್ ಬಳಿಕ ಕಳೆದ ಒಂದು ತಿಂಗಳಿನಿಂದ ಸುಮಾರು 15 ಒನ್ಲೈನ್ ಕೇಳಿದ್ದೇನೆ. ನಾನು ಜನರ ಈ ನಂಬಿಕೆ ಗಳಿಸಲು, ಈ ಹಂತಕ್ಕೆ ಬರಲು 9 ವರ್ಷ ಬೇಕಾಯಿತು. ಸಿಕ್ಕಿದ್ದನ್ನೆಲ್ಲ ಮಾಡಿಕೊಂಡು ಹೋಗಲು ಇಷ್ಟವಿಲ್ಲ. ಹೀಗಾಗಿ ತುಂಬ ಎಚ್ಚರಿಕೆಯಿಂದ ಆಯ್ಕೆ ಮಾಡುತ್ತಿದ್ದೇನೆ. 15ರಲ್ಲಿ ನಾಲ್ಕೈದು ನೆಗಟಿವ್ ಪಾತ್ರಗಳು, ಏಳೆಂಟು ನಾಯಕ ಪಾತ್ರಗಳೂ ಇವೆ. ಸದ್ಯಕ್ಕೆ ನಾನು ಯಾವುದಕ್ಕೂ ಇಲ್ಲ ಎಂದಿಲ್ಲ. ಪೂರ್ತಿ ಕಥೆ ಕೇಳಿ ನಂತರ ನಿರ್ಧರಿಸಲಿದ್ದೇನೆ' ಎಂದು ಮಾಹಿತಿ ನೀಡುತ್ತಾರೆ.