ರೋಹಿತ್ (ಅಫ್ಜಲ್), ಅಭಿ (ವಸಿಷ್ಠ), ವಿಮಲ್ (ವಿನಯ್) ಮತ್ತು ಮನೋಜ್ (ರಣವೀರ್) ನಾಲ್ವರು ಬಾಲ್ಯದ ಗೆಳೆಯರು. ಕಾಲೇಜು ಶಿಕ್ಷಣದ ಬಳಿಕ ಬದುಕು ಕಟ್ಟಿಕೊಳ್ಳಲು ಒಬ್ಬೊಬ್ಬರು ಒಂದೊಂದು ಹಾದಿ ಹಿಡಿದು, ದೂರವಾಗಿರುತ್ತಾರೆ. ಕೆಲ ವರ್ಷಗಳ ಬಳಿಕ ನಾಲ್ವರೂ ಗೆಟ್ ಟುಗೆದರ್ ಪಾರ್ಟಿಗೆ ಪ್ಲ್ಯಾನ್ ಮಾಡಿಕೊಂಡು, ಒಂದು ರೆಸಾರ್ಟ್ ಸೇರುತ್ತಾರೆ. ಮದ್ಯದ ನಶೆಯಲ್ಲಿ ತೇಲುತ್ತಾ, ಕಾಲೇಜು ಬಳಿಕ ತಮ್ಮ ಜೀವನದಲ್ಲಿ ನಡೆದ ಘಟನೆಗಳನ್ನು ಒಬ್ಬೊಬ್ಬರಾಗಿ ಹೇಳಿಕೊಳ್ಳತೊಡಗುತ್ತಾರೆ. ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರುವ ಅಭಿ ಮನೆಯವರ ಒತ್ತಡಕ್ಕೆ ಮದುವೆಗೆ ಒಪ್ಪುತ್ತಾನೆ. ಒಡವೆ ಖರೀದಿಸಲು ಸಾಲ ಮಾಡುತ್ತಾನೆ. ಆದರೆ, ಮದುವೆಯಾಗಬೇಕಿದ್ದ ಹುಡುಗಿಯೇ ಓಡಿ ಹೋಗಿ, ಸಾಲಗಾರರ ಕಾಟಕ್ಕೆ ಒಳಗಾಗಿರುತ್ತಾನೆ. ಫುಡ್ ಡೆಲಿವರಿ ಬಾಯ್ ಆಗಿ ಕೆಲಸಕ್ಕೆ ಸೇರುವ ವಿಮಲ್ ದಾರಿ ತಪ್ಪಿ, ಕೊಲೆ ಆರೋಪಕ್ಕೆ ತುತ್ತಾಗುತ್ತಾನೆ. ಕೆಲಸವಿಲ್ಲದೇ ಕಳ್ಳತನಕ್ಕಿಳಿಯುವ ಮನೋಜ್ ಕೂಡ ಇಲ್ಲದ ಸಂಕಷ್ಟಕ್ಕೆ ಸಿಲುಕುತ್ತಾನೆ. ಹಾಗೇ ಒಳ್ಳೆತನದಿಂದಲೇ ನಂಬಿಕೆ ಗಳಿಸುವ ರೋಹಿತ್ ಸಹ, ಹಾದಿ ತಪ್ಪಿ ನಂಬಿಕೆ ಕಳೆದುಕೊಳ್ಳುತ್ತಾನೆ. ಹೀಗೆ ತಮ್ಮದೇ ಸಮಸ್ಯೆಗಳಲ್ಲಿ ಸಿಲುಕಿರುವ ನಾಲ್ವರಿಗೂ ಒಂದು ಲಿಂಕ್ ಇರುತ್ತದೆ. ಅದೇನು? ಸಮಸ್ಯೆಗಳಿಂದ ಅವರು ಹೇಗೆ ಹೊರಬರುತ್ತಾರೆ? ಎಂಬುದೇ "ನೆನಪುಗಳ ಮಾತು ಮಧುರ' ಕಥೆ.