ಟಾಲಿವುಡ್ ನಟ ನಾಗಾರ್ಜುನ ವೃತ್ತಿ ಬದುಕಿನಲ್ಲಿ ಮೈಲಿಗಲ್ಲು ಸಾಧಿಸಲು ಹೊರಟಿದ್ದಾರೆ. ಅರ್ಥಾತ್, ಅವರು ತಮ್ಮ ಸಿನಿ ಕೆರಿಯರ್‌ನ 100ನೇ ಚಿತ್ರದ ಚಿತ್ರೀಕರಣದಲ್ಲಿದ್ದು, ಆ ಮೂಲಕ ನಟನೆಯಲ್ಲಿ ಶತಕ ಬಾರಿಸಲು ಸಜ್ಜಾಗಿದ್ದಾರೆ. ಈ ಸಾಧನೆ ಮಾಡಿದ ಕೃಷ್ಣ, ರಾಜೇಂದ್ರ ಪ್ರಸಾದ್, ಚಿರಂಜೀವಿ, ನಂದಮೂರಿ ಬಾಲಕೃಷ್ಣ ಸಾಲಿಗೆ ಇದೀಗ ನಾಗಾರ್ಜುನ ಕೂಡ ಸೇರಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದ ಶೂಟಿಂಗ್ ಸದ್ಯ ಭರ್ಜರಿಯಾಗಿ ನಡೆಯುತ್ತಿದೆ. ಅದರ ನಡುವೆಯೇ ಈ ಸಿನಿಮಾದಲ್ಲಿ ನಾಗಾರ್ಜುನಗೆ ನಾಯಕಿ ಯಾರು? ಎಂಬ ವಿಷಯವನ್ನು ಚಿತ್ರತಂಡ ಎಲ್ಲಿಯೂ ಬಿಟ್ಟುಕೊಟ್ಟಿರಲಿಲ್ಲ. ಇದೀಗ ಈ ಮಾಹಿತಿ ಹೊರಬಿದ್ದಿದ್ದು, ಬಹುಭಾಷಾ ತಾರೆ ತಬು, ಟಾಲಿವುಡ್ ನಟನ ಜತೆ ಮತ್ತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಈ ವಿಚಾರವನ್ನು ಸ್ವತಃ ಅವರೇ ‘ಕಿಂಗ್ 100’ ಶೂಟಿಂಗ್‌ನ ಕ್ಲ್ಯಾಪ್‌ಬೋರ್ಡ್ ಹಂಚಿಕೊಂಡು ಖಚಿತಪಡಿಸಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ತಬು ತೆಲುಗಿನ ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ನಟ ನಾಗಾರ್ಜುನ ಹಾಗೂ ತಬು ಜೋಡಿ ‘ನಿನ್ನೆ ಪೆಳ್ಲಾಡತಾ’, ‘ಆವಿಡಾ ಮಾ ಆವಿಡೆ’ ಎರಡೇ ಚಿತ್ರದಲ್ಲಿ ನಟಿಸಿದ್ದರೂ, ಟಾಲಿವುಡ್‌ನಲ್ಲಿ ಮೋಡಿ ಮಾಡಿತ್ತು. ಇದೀಗ ‘ಆವಿಡಾ ಮಾ ಆವಿಡೆ’ (1998) ತೆರೆಕಂಡು 28 ವರ್ಷಗಳ ಬಳಿಕ ಈ ಜೋಡಿ ಮತ್ತೆ ಒಂದಾಗಿದ್ದು, ನಿರೀಕ್ಷೆ ಹೆಚ್ಚಿಸಿದೆ. ‘ಮೇಡ್ ಇನ್ ಕೊರಿಯಾ’ ಖ್ಯಾತಿಯ ನವೀನ್ ಕಾರ್ತಿಕ್ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಇದೇ ವರ್ಷ ಸಿನಿಮಾ ತೆರೆಗೆ ಬರಲಿದೆ. ಸದ್ಯ ತಬು ತೆಲುಗಿನ ‘ಸ್ಲಂ ಡಾಗ್: 33 ಟೆಂಪಲ್ ರೋಡ್’ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. -ಏಜೆನ್ಸೀಸ್