"ಆ ದಿನಗಳು' ತೆರೆಕಂಡು 19 ವರ್ಷಗಳ ನಂತರ ಕೆ.ಎಂ. ಚೈತನ್ಯ ನಿರ್ದೇಶಿಸುತ್ತಿರುವ ಹೊಸ ಅಂಡರ್ವರ್ಲ್ಡ್ ಕುರಿತ ಸಿನಿಮಾ "ಬಲರಾಂನ ದಿನಗಳು'. ಇದೊಂದು ನೈಜ ಪಾತ್ರಗಳ ಹಿನ್ನೆಲೆಯಲ್ಲಿ ಸಾಗುವ ಕಾಲ್ಪನಿಕ ಕಥೆಯಾಗಿದ್ದು, ವಿನೋದ್ ಪ್ರಭಾಕರ್, ಪ್ರಿಯಾ ಆನಂದ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ದಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣ್ ಚಿತ್ರಕ್ಕೆ ಸಂಗೀತ ನೀಡಿದ್ದು, ಈಗಾಗಲೇ ಎರಡು ಹಾಡುಗಳು ವೈರಲ್ ಆಗಿವೆ. ಅದರ ಬೆನ್ನಲ್ಲೇ ಇತ್ತೀಚೆಗಷ್ಟೆ "ಕ್ವಾರ್ಟರು' ಎಂದು ಸಾಗುವ ರೆಟ್ರೋ ಶೈಲಿಯ ಪಾರ್ಟಿ ಹಾಡನ್ನು ನಟಿ ತಾರಾ ಅನುರಾಧ ಬಿಡುಗಡೆ ಮಾಡಿದರು. ಈ ಪೆಪ್ಪಿ ಹಾಡಿಗೆ "ಉಪಾಧ್ಯಕ್ಷ' ಚಿತ್ರದ ನಾಯಕಿ ವಂದಿತಾ ಗೌಡ ಕುಣಿದು ಕುಪ್ಪಳಿಸಿದ್ದಾರೆ. ಪದ್ಮಾವತಿ ಜಯರಾಮ್ ಮತ್ತು ಶ್ರೇಯಸ್ "ಬಲರಾಮನ ದಿನಗಳು' ನಿರ್ಮಿಸಿದ್ದು, ಇದೇ 26ಕ್ಕೆ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಇನ್ನೊಂದು ಹಾಡು ಮತ್ತು ಟ್ರೇಲರ್ ರಿಲೀಸ್ ಮಾಡುವ ಪ್ಲ್ಯಾನ್ ಚಿತ್ರತಂಡದ್ದು. ಕೆ.ಎಂ.ಚೈತನ್ಯ, "ಚಿತ್ರದಲ್ಲಿ ಐದು ಹಾಡುಗಳು, ಎರಡು ಬಿಟ್ಗಳಿವೆ. ವಿನೋದ್ ಪ್ರಭಾಕರ್ ಅದ್ಭುತವಾಗಿ ನಟಿಸಿದ್ದಾರೆ. "ಆ ದಿನಗಳು' ಸಮಯದಲ್ಲಿ ನಡೆಯುವ ಹಾಗೂ ಅದರ ಮುಂದುವರಿದ ಕಥೆಯಿದು. ಸಾಕಷ್ಟು ಪುಸ್ತಕಗಳನ್ನು ಅಧ್ಯಯನ ಮಾಡಿ, ಅಂಡರ್ವರ್ಲ್ಡ್ ಬಗ್ಗೆ ಹಲವರ ಜತೆ ಚರ್ಚಿಸಿ ಈ ಕಥೆ ಬರೆದಿದ್ದೇನೆ. ಇದು ಒಳ್ಳೆ ಥಿಯೇಟ್ರಿಕಲ್ ಅನುಭವ ನೀಡುವ ಸಿನಿಮಾ, ಹೀಗಾಗಿ ಥಿಯೇಟರ್ನಲ್ಲೇ ನೋಡಿ' ಎಂದರು. ನಾಯಕ ವಿನೋದ್, ""ಮಾದೇವ' ನಂತರ ಕಮಿಟ್ ಆದ ಚಿತ್ರವಿದು. ಒಬ್ಬ ನಟನಾಗಿ ಯಾವುದೇ ಪಾತ್ರದಲ್ಲೂ ನಟಿಸಲು ನಾನು ಸಿದ್ಧ. ನನ್ನ ಇದುವರೆಗಿನ ಸಿನಿಮಾ ಜೀವನದಲ್ಲೇ ಅತಿ ದೊಡ್ಡ ಬಜೆಟ್ ಚಿತ್ರವಿದು. ಕೆವಿಎನ್ ನಿರ್ಮಾಣ ಸಂಸ್ಥೆ ವಿತರಣೆ ಮಾಡುತ್ತಿರುವುದು ನಮಗೆ ಆನೆಬಲ ಸಿಕ್ಕಂತಾಗಿದೆ' ಎಂದು ಸಂತಸ ಹಂಚಿಕೊಂಡರು.