ದ ರೈಸ್ ಆಫ್ ಸಪ್ತಮಿ : 70ರ ದಶಕದ ಹಳ್ಳಿ ಹುಡುಗಿಯ ಪಾತ್ರದಲ್ಲಿ ‘ಕಾಂತಾರ’ ನಟಿ

ಸಪ್ತಮಿ ಗೌಡ
ಸಪ್ತಮಿ ಗೌಡ
Published on

ಪ್ರಮುಖ ಮುಖ್ಯಾಂಶಗಳು

  • ಎರಡು ವರ್ಷಗಳ ಬಳಿಕ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವ ಸಪ್ತಮಿ
  • ದ ರೈಸ್ ಆಫ್ ಅಶೋಕ ಚಿತ್ರದ ಮೂಲಕ ಹೊಸ ಭರವಸೆಯಲ್ಲಿ ಲೀಲಾ
  • ಪಾತ್ರಗಳ ಆಯ್ಕೆಗೆ ಹಲವು ಮಾನದಂಡ ಅನುಸರಿಸುವ ನಾಯಕಿ
ಬೆಂಗಳೂರು: ‘ಕಾಂತಾರ’ ಚಿತ್ರದ ಲೀಲಾ ಪಾತ್ರದ ಮೂಲಕ ಇಡೀ ಭಾರತೀಯ ಚಿತ್ರರಂಗದ ಗಮನಸೆಳೆದವರು ನಟಿ ಸಪ್ತಮಿ ಗೌಡ. ಈ ಚಿತ್ರ ನಟಿಗೆ ದೊಡ್ಡಮಟ್ಟದಲ್ಲಿ ಯಶಸ್ಸು ತಂದುಕೊಟ್ಟಿತ್ತು. ಹಾಗಾಗಿ, ಆ ಯಶಸ್ಸನ್ನು ಅವರು ಮುಂದೆ ಉತ್ತಮ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಜವಾಬ್ದಾರಿಯಿಂದ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ. ‘ಯುವ’ ಬಳಿಕ ಸಪ್ತಮಿ ಗೌಡ ಕನ್ನಡ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿಲ್ಲ. ಇದೀಗ ಎರಡು ವರ್ಷಗಳ ಬಳಿಕ ‘ದ ರೈಸ್ ಆಫ್​ ಅಶೋಕ’ ಮೂಲಕ ಮತ್ತೊಮ್ಮೆ ತೆರೆಗೆ ಬರುತ್ತಿದ್ದಾರೆ. ಇಲ್ಲಿ ಸಪ್ತಮಿ ಹಳ್ಳಿ ಹುಡುಗಿ ಪಾತ್ರದಲ್ಲಿದ್ದು, ಕನ್ನಡ ಚಿತ್ರರಂಗದಲ್ಲಿ ಮತ್ತೆ ದೊಡ್ಡಮಟ್ಟದಲ್ಲಿ ‘ರೈಸ್’ ಆಗುವ ತವಕದಲ್ಲಿದ್ದಾರೆ. ಪಾತ್ರ ಹಾಗೂ ಸಿನಿಮಾ ಜರ್ನಿ ಕುರಿತಂತೆ ಸಪ್ತಮಿ, ‘70ರ ದಶಕದ ಕಥೆ ಇದು. ಇಲ್ಲಿ ಅಂಬಿಕಾ ಎಂಬ ಹೂ ಮಾರುವ ಹುಡುಗಿ ಪಾತ್ರದಲ್ಲಿದ್ದೇನೆ. ಮನೆಯ ನಿರ್ವಹಣೆಗಾಗಿ ಅವಳು ಹೂ ಕಟ್ಟಿ ಮಾರುತ್ತಿರುತ್ತಾಳೆ. ನನ್ನದು ರೆಬೆಲ್​ ಅಥವಾ ಸೈಲೆಂಟ್ ಪಾತ್ರ ಅಂತೇನಲ್ಲ. ಸನ್ನಿವೇಶಕ್ಕೆ ತಕ್ಕಂತೆ ಪ್ರತಿಕ್ರಿಯಿಸುವ ಹುಡುಗಿ. ನಿರ್ಧಾರ ತೆಗೆದುಕೊಳ್ಳುವಾಗ ಅವಳ ಸುತ್ತ ಒಂದಷ್ಟು ಸವಾಲು, ಸಂಘರ್ಷಗಳಿರುತ್ತವೆ. ಅದನ್ನೇ ಹೇಗೆ ನಿರ್ವಹಿಸುತ್ತಾಳೆ ಎಂಬುದೇ ದೊಡ್ಡ ವಿಷಯ. ಇದೇ ಕಾರಣಕ್ಕಾಗಿಯೇ ಸತೀಶ್ ಸರ್ ನನ್ನ ಪಾತ್ರದ ಚಿತ್ರದ ಹೈಲೈಟ್ ಎಂದು ಹೇಳಿರಬಹುದು. ಕ್ಲೈಮ್ಯಾಕ್ಸ್ ಹಾಗೂ ಮಧ್ಯಂತರ ಭಾಗದಲ್ಲಿ ಬರುವ ಭಾವನಾತ್ಮಕ ದೃಶ್ಯವೊಂದು ತುಂಬಾ ಇಷ್ಟವಾಯಿತು. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದರು, ಹಳ್ಳಿ ವಾತಾವರಣದ ಬಗ್ಗೆ ಅರಿವಿದೆ. ಅಲ್ಲಿನ ಸಾಮಾಜಿಕ ವಿಚಾರಗಳು ಬಗ್ಗೆ ಕೇಳಿ ತಿಳಿದುಕೊಂಡಿದ್ದೇನೆ ಹಾಗೂ ನೋಡಿದ್ದೇನೆ. ಈ ಕಾರಣಕ್ಕಾಗಿ ‘ದ ರೈಸ್ ಆಫ್​ ಅಶೋಕ’ ನನಗೆ ಆಪ್ತವಾಗುತ್ತದೆ’ ಎಂದು ಮಾಹಿತಿ ಹಂಚಿಕೊಂಡರು.

ಪಾತ್ರಗಳು ಕಥೆ ಹೇಳಬೇಕು

ಸಪ್ತಮಿ ಗೌಡ ಪಾತ್ರಗಳ ಆಯ್ಕೆ ವಿಚಾರದಲ್ಲಿ ಕೆಲ ಮಾನದಂಡಗಳನ್ನು ಅನುಸರಿಸುತ್ತಾರೆ. ಅದರಲ್ಲಿ ಕನಿಷ್ಠ ಎರಡು ವಿಷಯಗಳಾದರೂ ಇರಬೇಕು ಎನ್ನುವ ಅವರು, ‘ನನಗೆ ಪಾತ್ರ ಆಯ್ಕೆಗೆ ಒಂದಷ್ಟು ಮಾನದಂಡಗಳನ್ನು ಅನುಸರಿಸುತ್ತೇನೆ. ಪಾತ್ರ ಹೊಸ ಪ್ರಯತ್ನವಾಗಿರಬೇಕು ಜತೆಗೆ ಲುಕ್ ವಿಚಾರದಲ್ಲಿ ಹೊಸತನದಿಂದ ಕೂಡಿದ್ದು, ಕಲಿಕೆಗೆ ಅನುಕೂಲವಾಗಿರಬೇಕು. ಮುಖ್ಯವಾಗಿ ಸ್ಕ್ರಿಪ್ಟ್ ಚೆನ್ನಾಗಿದ್ದು, ನನ್ನ ಪಾತ್ರ ಕಥೆ ಹೇಳುವಂತಿರಬೇಕು. ಈ ಎಲ್ಲ ಅಂಶಗಳಲ್ಲಿ ಕನಿಷ್ಠ ಒಂದೆರಡು ಅಂಶಗಳಿದ್ದರೆ ಒಪ್ಪಿಕೊಳ್ಳುವೆ. ಮುಖ್ಯವಾಗಿ ಚಿತ್ರಕಥೆಗೆ ಹೆಚ್ಚು ಒತ್ತುಕೊಡುವೆ. ಗ್ಲಾಮ್ ಅಥವಾ ಡಿ-ಗ್ಲಾಮ್ ಎಂಬ ವ್ಯತ್ಯಾಸ ನೋಡದೆ ಎರಡು ರೀತಿಯಲ್ಲಿ ಕಾಣಿಸಿಕೊಳ್ಳಲು ಇಷ್ಟಪಡುತ್ತೇನೆ. ಪಾತ್ರ ಏನು ಕೇಳುತ್ತದೆಯೋ ಆ ಲುಕ್‌ಗೆ ಒಗ್ಗಿಕೊಳ್ಳುತ್ತೇನೆ. ಸದ್ಯ ‘ಹಲಗಲಿ’ ಚಿತ್ರದಲ್ಲಿ ನಟಿಸುತ್ತಿದ್ದೇನೆ, ಶೀಘ್ರದಲ್ಲಿ ಕನ್ನಡದ ಮತ್ತೊಂದು ಹೊಸ ಸಿನಿಮಾ ಘೋಷಣೆಯಾಗಲಿದೆ’ ಎಂದು ಖುಷಿಹಂಚಿಕೊಳ್ಳುತ್ತಾರೆ ಸಪ್ತಮಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net