ಕನ್ನಡದ ‘ಸಪ್ತ ಸಾಗರದಾಚೆ ಎಲ್ಲೋ’ ಸರಣಿ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದ ನಟಿ ರುಕ್ಮಿಣಿ ವಸಂತ್, ಕಳೆದ ವರ್ಷ ತೆರೆಕಂಡ ‘ಕಾಂತಾರ ಅಧ್ಯಾಯ 1’ ಬಳಿಕ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಸದ್ಯ ಅವರು ಯಶ್ ಅಭಿನಯದ ಪ್ಯಾನ್ ವರ್ಲ್ಡ್ ‘ಟಾಕ್ಸಿಕ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಈ ಮೂಲಕ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯಲು ಸಿದ್ಧರಾಗಿದ್ದಾರೆ. ಅಷ್ಟೇ ಅಲ್ಲದೇ ಪರಭಾಷೆ ಸಿನಿಮಾಗಳಲ್ಲೂ ಬಿಜಿಯಾಗಿರುವ ರುಕ್ಮಿಣಿ ಅದರ ಮಧ್ಯೆ ಮತ್ತೊಂದು ಕನ್ನಡ ಚಿತ್ರಕ್ಕೆ ಸಹಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ‘ಸಪ್ತ ಸಾಗರದಾಚೆ ಎಲ್ಲೋ’ ಬಳಿಕ ನಿರ್ದೇಶಕ ಹೇಮಂತ್ ರಾವ್ ಮತ್ತು ರುಕ್ಮಿಣಿ ವಸಂತ್ ಮತ್ತೊಮ್ಮೆ ಕೈಜೋಡಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಸದ್ಯ ಈ ಚಿತ್ರದ ಕೆಲಸಗಳು ಭರದಿಂದ ಸಾಗಿದ್ದು, ಕೆವಿಎನ್ ಪ್ರೊಡಕ್ಷನ್ ಮೂಲಕ ವೆಂಕಟ್ ಕೆ. ನಾರಾಯಣ್ ಬಂಡವಾಳ ಹೂಡುತ್ತಿದ್ದಾರೆ. ಕನ್ನಡದ ‘ಕೆಡಿ’, ‘ಟಾಕ್ಸಿಕ್‘, ತಮಿಳಿನ ‘ಜನ ನಾಯಗನ್’, ಹಿಂದಿಯ ‘ಹೈವಾನ್’ ಬಿಡುಗಡೆ ಸನಿಹದಲ್ಲಿದ್ದು, ಮಲಯಾಳಂ, ತೆಲುಗಿನಲ್ಲಿ ಚಿರಂಜೀವಿ ಜತೆ ಸಿನಿಮಾ ಶೂಟಿಂಗ್‌ನಲ್ಲಿರುವಾಗಲೇ ಕೆವಿಎನ್ ಸಂಸ್ಥೆ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಸಜ್ಜಾಗಿದೆ. ಈ ಸಿನಿಮಾ ಕನ್ನಡದಲ್ಲಿ ಮೂಡಿಬರಲಿದ್ದು, ಬೇರೆ ಭಾಷೆಗಳಿಗೂ ಡಬ್ ಆಗಲಿದೆ. ಹೇಮಂತ್ ರಾವ್ ಈ ಚಿತ್ರದ ಭಾಗವಾಗಿದ್ದರೂ ಸದ್ಯ ಅವರು ‘666 ಆಪರೇಷನ್ ಡ್ರೀಮ್ ಥಿಯೇಟರ್’ನಲ್ಲಿ ಬಿಜಿಯಿರುವ ಕಾರಣ ಅವರೇ ಇದನ್ನು ನಿರ್ದೇಶಿಸಲಿದ್ದಾರಾ ಎಂಬುದ ಕುರಿತು ಸ್ಪಷ್ಟತೆ ಸಿಕ್ಕಿಲ್ಲ. ರುಕ್ಮಿಣಿ ಜತೆ ಹಿರಿಯ ನಟಿ ಮಾಲಾಶ್ರೀ ಅಭಿನಯಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಉಳಿದಂತೆ ರುಕ್ಮಿಣಿ ವಸಂತ್ ಸದ್ಯ ‘ಎನ್‌ಟಿಆರ್-ನೀಲ್’ ಕಾಂಬಿನೇಷನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೇ, ‘ಪ್ರಳಯ್’ ಮೂಲಕ ಹಿಂದಿಗೆ ಡೆಬ್ಯೂ ಆಗುತ್ತಿದ್ದಾರೆ ಎಂಬ ಮಾತಿದೆ. -ಏಜೆನ್ಸೀಸ್