ರಶ್ಮಿಕಾ @ 30 : ನಟಿಯ ಹುಟ್ಟುಹಬ್ಬಕ್ಕೆ ಮುಂದಿನ ಚಿತ್ರಗಳ ಪೋಸ್ಟರ್, ಮೇಕಿಂಗ್ ವಿಡಿಯೋ ಗಿಫ್ಟ್​

ನಟಿ ರಶ್ಮಿಕಾ ಮಂದಣ್ಣ
ನಟಿ ರಶ್ಮಿಕಾ ಮಂದಣ್ಣ
Published on

ಪ್ರಮುಖ ಮುಖ್ಯಾಂಶಗಳು

  • ಕುಟುಂಬದ ಜತೆ 30ನೇ ಹುಟ್ಟುಹಬ್ಬ ಆಚರಿಸಿಕೊಂಡ ರಶ್ಮಿಕಾ
  • ಎರಡು ಚಿತ್ರತಂಡಗಳಿಂದ ನಟಿಗೆ ವಿಶೇಷ ಉಡುಗೊರೆ
  • ಈ ವರ್ಷದಲ್ಲಿ ನಟಿಯ ಮೂರು ಸಿನಿಮಾಗಳು ಬಿಡುಗಡೆಗೆ ಸಿದ್ಧ
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ 30ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಭಾನುವಾರ (ಏ.5) ಸರಳವಾಗಿ ಬರ್ತ್‌ಡೇ ಆಚರಣೆ ಮಾಡಿಕೊಂಡಿದ್ದಾರೆ. ಇನ್ನು, ನಟ ವಿಜಯ್ ದೇವರಕೊಂಡ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ನಟಿ ಆಚರಿಸಿಕೊಳ್ಳುತ್ತಿರುವ ಮೊದಲನೇ ಹುಟ್ಟುಹಬ್ಬ ಇದಾಗಿದ್ದು, ಈ ಹಿನ್ನೆಲೆಯಲ್ಲಿ ತಾರಾಜೋಡಿಗೆ ಇದು ವಿಶೇಷವಾಗಿದೆ. ಹುಟ್ಟುಹಬ್ಬಕ್ಕೆ ಒಂದು ದಿನ ಮುನ್ನವೇ ಶನಿವಾರ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದ ರಶ್ಮಿಕಾ, ಅಭಿಮಾನಿಗಳು ತಂದ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಮದುವೆ ಬಳಿಕವೂ ರಶ್ಮಿಕಾ ಮಂದಣ್ಣ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಈ ವರ್ಷ ನಟಿಯ ಮೂರು ಚಿತ್ರಗಳು ರಿಲೀಸ್ ಆಗಲಿವೆ. ಹುಟ್ಟುಹಬ್ಬದ ವಿಶೇಷವಾಗಿ ಚಿತ್ರತಂಡಗಳು ಹೊಸ ಪೋಸ್ಟರ್, ಮೇಕಿಂಗ್ ವಿಡಿಯೋ ರಿಲೀಸ್ ಮಾಡಿ ಉಡುಗೊರೆ ನೀಡಿವೆ. -ಏಜೆನ್ಸೀಸ್

ರಣಬಾಲಿಯ ಜಯಮ್ಮ

ಪತಿ, ನಟ ವಿಜಯ್ ದೇವರಕೊಂಡ ಜತೆ ಒಂಬತ್ತು ವರ್ಷಗಳ ಬಳಿಕ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿರುವ ಸಿನಿಮಾ ‘ರಣಬಾಲಿ’. ಸದ್ಯ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಇಲ್ಲಿ ರಶ್ಮಿಕಾ ‘ಜಯಮ್ಮ’ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬರ್ತ್‌ಡೇಗೆ ‘ಜಯಮ್ಮ’ ಪಾತ್ರದ ಮೇಕಿಂಗ್ ವಿಡಿಯೋ ಚಿತ್ರತಂಡ ಹರಿಬಿಟ್ಟಿದೆ. ಜಯಮ್ಮ ಪಾತ್ರಕ್ಕಾಗಿ ರಶ್ಮಿಕಾ ಸಿದ್ಧವಾಗುತ್ತಿರುವ ವಿಡಿಯೋ ಇದಾಗಿದೆ. ವಿಜಯ್ ದೇವರಕೊಂಡ ಈ ವಿಡಿಯೋ ಹಂಚಿಕೊಂಡು ‘ಐ ಲವ್ ಯು ಜಯಮ್ಮ’ ಎಂದು ಪತ್ನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ‘ಬೂದು ಬಣ್ಣದಿಂದ ಚಿತ್ರಿಸಲಾದ ಈ ಜಗತ್ತಿನಲ್ಲಿ, ಅವಳು, ಅವನ ಏಕೈಕ ಬಣ್ಣವಾಗಿದ್ದಳು. ಈ ಮೂಲಕ ರಣಬಾಲಿಯ ಶಕ್ತಿಯನ್ನು ಸಂಭ್ರಮಿಸಲಾಗುತ್ತದೆ’ ಎಂದು ಮೇಕಿಂಗ್ ವಿಡಿಯೋದಲ್ಲಿ ಕ್ಯಾಪ್ಶನ್ ಬರೆಯಲಾಗಿದೆ. ಇದೇ ಸೆ.11ರಂದು ‘ರಣಬಾಲಿ’ ತೆರೆ ಮೇಲೆ ಬರಲಿದೆ.

ಪವರ್‌ಫುಲ್ ‘ಮೈಸಾ’

‘ರಣಬಾಲಿ’ ಜತೆಗೆ ರಶ್ಮಿಕಾ ಮಂದಣ್ಣ ‘ಮೈಸಾ’ ಎಂಬ ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಈವರೆಗೂ ಕಾಣಿಸದ ರೀತಿಯಲ್ಲಿ ಪವರ್‌ಫುಲ್ ಪಾತ್ರದಲ್ಲಿ ಅವರು ಅಭಿನಯಿಸುತ್ತಿದ್ದಾರೆ. ಈ ಹಿಂದೆ ಪಾತ್ರ ಪರಿಚಯಿಸುವ ಟೀಸರ್ ರಿಲೀಸ್ ಮಾಡಲಾಗಿತ್ತು. ಇದೀಗ ಹುಟ್ಟುಹಬ್ಬದ ನಿಮಿತ್ತ ಮತ್ತೊಂದು ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ಇಲ್ಲಿ ರಶ್ಮಿಕಾ ರಕ್ತಸಿಕ್ತವಾಗಿ ಕಾಣಿಸಿಕೊಂಡಿದ್ದಾರೆ. ‘ಅವಳು ಮೋಡಿ ಮಾಡಿ ಆಳಿದಳು, ಕೆಲಸ ಮೂಲಕವೇ ಗೆದ್ದು ತೋರಿಸಿದಳು, ಇದೀಗ ಅವಳು ಕ್ರೋಧಳಾಗಿ ನಮ್ಮ ಮುಂದೆ ಬರುತ್ತಿದ್ದಾಳೆ’ ಎಂದು ಪೋಸ್ಟರ್‌ಗೆ ಅಡಿಬರಹ ಬರೆಯಲಾಗಿದೆ. ರವೀಂದ್ರ ಪುಲ್ಲೆ ನಿರ್ದೇಶನದ ಈ ಸಿನಿಮಾ ಇದೇ ವರ್ಷ ತೆರೆಗೆ ಬರಲಿದೆ.

‘ಕಾಕ್‌ಟೇಲ್ 2’ ಬೋಲ್ಡ್

ರಶ್ಮಿಕಾ ಮಂದಣ್ಣ ಕನ್ನಡ, ತಮಿಳು, ತೆಲುಗು ಚಿತ್ರರಂಗದಲ್ಲಿ ಮಿಂಚಿದ್ದಂತೆ ಬಾಲಿವುಡ್‌ನಲ್ಲೂ ಗಮನಸೆಳೆದಿದ್ದಾರೆ. ಈಗಾಗಲೇ ಹಿಂದಿಯ ‘ಗುಡ್ ಬೈ’, ‘ಮಿಷನ್ ಮಜ್ನು’, ‘ಅನಿಮಲ್’, ‘ಛಾವಾ’. ‘ಸಿಕಂದರ್’ ಚಿತ್ರಗಳಲ್ಲಿ ನಟಿಸಿ, ಸೈ ಎನಿಸಿಕೊಂಡಿದ್ದಾರೆ. ಸದ್ಯ ‘ಕಾಕ್‌ಟೇಲ್ 2’ ಚಿತ್ರದಲ್ಲೂ ನಟಿಸಿದ್ದು, ತೆರೆಗೆ ಬರಲು ಸಿದ್ಧವಾಗಿದೆ. ಇತ್ತೀಚೆಗೆ ಚಿತ್ರತಂಡವು ರಶ್ಮಿಕಾ ಪಾತ್ರ ಪರಿಚಯಿಸಲಾಗಿದ್ದು, ಇಲ್ಲಿ ಅವರು ಬೋಲ್ಡ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಜೂನ್ 19ಕ್ಕೆ ಚಿತ್ರ ರಿಲೀಸ್ ಆಗಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net