"ಸಿನಿಮಾ ಅಂದರೆ ನನಗೆ ತುಂಬ ಇಷ್ಟ. ಸಣ್ಣ ವಯಸ್ಸಿನಿಂದಲೂ ಅದೇ ನನ್ನ ಕನಸು' ಎನ್ನುವ ಪ್ರಿಯಾಂಕಾ, "ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಿರಬೇಕು, ಜನರ ಮುಂದೆ ಬರುತ್ತಿರಬೇಕು ಎಂಬ ಆಸೆ ಎಲ್ಲ ಕಲಾವಿದರಿಗೂ ಇರುತ್ತದೆ. ಹಾಗಂತ ಹಾಗೆ ಬಂದು ಹೀಗೆ ಹೋಗಲು ನನಗಿಷ್ಟವಿಲ್ಲ. ಅಂತಹ ಪಾತ್ರದಲ್ಲಿ ಕಾಣಿಸಿಕೊಂಡರೆ, ಜನ ಮರೆತುಬಿಡುತ್ತಾರೆ. ಹೀಗಾಗಿ ಎರಡು ವರ್ಷವಾಗಲಿ, ಐದು ವರ್ಷಗಳೇ ಆಗಲಿ ಒಂದೊಳ್ಳೆ ಪಾತ್ರದ ಮೂಲಕ ತುಂಬ ವರ್ಷಗಳ ಕಾಲ ಜನರ ಮನಸ್ಸಿನಲ್ಲಿ ಉಳಿಯುವಂತಹ ಪಾತ್ರಗಳಲ್ಲಿ ನಟಿಸಬೇಕು ಅನ್ನೋದು ನನ್ನಾಸೆ. ಹೀಗಾಗಿ ಮುಂದೆಯೂ ಸಹ ಕಥೆ, ತಡವಾದರೂ ಸರಿ ಒಳ್ಳೆ ಪಾತ್ರಗಳನ್ನಷ್ಟೇ ಆಯ್ಕೆ ಮಾಡಿಕೊಳ್ಳುತ್ತೇನೆ. ಹೀಗಾಗಿಯೇ ಕನ್ನಡ ಸೇರಿ ಬೇರೆ ಭಾಷೆಗಳಿಂದ ಕಥೆಗಳು ಬಂದರೂ, ನಾನು ಒಪ್ಪಿಲ್ಲ' ಎನ್ನುತ್ತಾರೆ. 10ನೇ ತರಗತಿವರೆಗೆ ಭರತನಾಟ್ಯ ಕಲಿತಿದ್ದ ಪ್ರಿಯಾಂಕಾ ಇದೀಗ "ಸೀತಾ ರಾಮ ರಾಜು'ಗಾಗಿ ಮತ್ತೆ ಭರತನಾಟ್ಯ ತರಬೇತಿ ಪಡೆಯಲಿದ್ದಾರಂತೆ. ಹಾಗೇ "ಕಥಕ್, ಬಾಕ್ಸಿಂಗ್, ಜಿಮ್, ಯೋಗ, ಡ್ರಾಯಿಂಗ್ ಹೀಗೆ ವಿವಿಧ ಕಲಾ ಪ್ರಕಾರಗಳನ್ನೇ ನಾನು ಕಲಿಯುತ್ತಿದ್ದೇನೆ' ಎಂದು ನಗುತ್ತಾರೆ.