Meghana Raj - ರಾಜಕಾರಣಿಯ ಬಯೋಪಿಕ್​ನಲ್ಲಿ ಮೇಘನಾ! ಯಾರಿರಬಹುದು ಆ ಪೊಲಿಟೀಷಿಯನ್​?

ಮೇಘನಾ ರಾಜ್ ಸರ್ಜಾ
ಮೇಘನಾ ರಾಜ್ ಸರ್ಜಾ
Published on
Meghana Raj -
ಮೇಘನಾ ರಾಜ್​ 16 ವರ್ಷಗಳ ಕರಿಯರ್​ನಲ್ಲಿ ಕನ್ನಡ ಸೇರಿ, ಮಲಯಾಳಂ, ತೆಲುಗು, ತಮಿಳಿನಲ್ಲಿ 40ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಇಂತಹ ಮೇಘನಾ 2019ರ "ಕುರುಕ್ಷೇತ್ರ' ಬಳಿಕ ಚಿರು ಸರ್ಜಾ ಜತೆ ಮದುವೆ, ಪುತ್ರ ರಾಯನ್​ ರಾಜ್​ ಸರ್ಜಾಗಾಗಿ ಚಿತ್ರರಂಗದಿಂದ ಬ್ರೇಕ್​ ಪಡೆದಿದ್ದರು. 2022ರಲ್ಲಿ "ಸೆಲ್ಫಿ ಮಮ್ಮಿ ಗೂಗಲ್​ ಡ್ಯಾಡಿ' ಮೂಲಕ ಕಮ್​ಬ್ಯಾಕ್​ ಮಾಡಿದ ಅವರು, 2023ರಲ್ಲಿ "ತತ್ಸಮ ತದ್ಭವ'ದಲ್ಲಿ ಕಾಣಿಸಿಕೊಂಡಿದ್ದರು. ಆ ನಂತರ "ಬುದ್ಧಿವಂತ 2'ರಲ್ಲಿ ನಟಿಸಿದ್ದರೂ, ಅದರ ಬಿಡುಗಡೆ ತಡವಾಗಿದೆ. ಅದರ ನಡುವೆಯೇ ಮೇಘನಾ ಸದ್ಯ ತಲಾ ಒಂದು ಕನ್ನಡ, ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ವಿಶೇಷ ಅಂದರೆ, ಇದೇ ಮೊದಲ ಬಾರಿಗೆ ಕರ್ನಾಟಕದ ಹೆಸರಾಂತ ರಾಜಕಾರಣಿಯೊಬ್ಬರ ಬಯೋಪಿಕ್​ನಲ್ಲಿ ಮೇನಾ ಕಾಣಿಸಿಕೊಳ್ಳಲಿದ್ದಾರೆ. ಆದರೆ, ಈಗಿನ್ನೂ ಈ ಸಿನಿಮಾ ಮಾತುಕತೆ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ. ಸದ್ಯ ಮೇಘನಾ ರಾಜ್​ ಕೋಮಲ್​ಗೆ ನಾಯಕಿಯಾಗಿ, "ಸಂಗೀತಾ ಬಾರ್​ ಆ್ಯಂಡ್​ ರೆಸ್ಟೋರೆಂಟ್​'ನಲ್ಲಿ ನಟಿಸುತ್ತಿದ್ದಾರೆ. ಹಾಗೇ ಏಳು ವರ್ಷಗಳ ಬಳಿಕ ಮಲಯಾಳಂಗೆ ಕಮ್​ಬ್ಯಾಕ್​ ಮಾಡಿರುವ ಅವರು ಸಂಸದ, ನಟ ಸುರೇಶ್​ ಗೋಪಿಗೆ ನಾಯಕಿಯಾಗಿ "ಒಟ್ಟಕೊಂಬನ್​'ನಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನು "ಜೈಲರ್​ 2' ಮೂಲಕ ಮೇಘನಾ 14 ವರ್ಷಗಳ ನಂತರ ತಮಿಳಿಗೂ ಕಮ್​ಬ್ಯಾಕ್​ ಮಾಡಿರುವುದು ಬಹುತೇಕ ಪಕ್ಕಾ ಆಗಿದ್ದು, ಆ ಬಗ್ಗೆ ಚಿತ್ರತಂಡ ಅಥವಾ ಖುದ್ದು ಅವರೇ ಅಧಿಕೃತ ಮಾಹಿತಿ ನೀಡಬೇಕಿದೆ.
ಹೇಗಿದ್ದಾನೆ ರಾಯನ್​?
ಮುದ್ದು ಮಗನ ಬಗ್ಗೆ ಮಾತನಾಡುವ ಮೇಘನಾ, "ರಾಯನ್​ ಈಗ ಮಾಂಟ್​ 3ಗೆ ಹೋಗುತ್ತಿದ್ದಾನೆ. ಮದುವೆಯ ಬಳಿಕ ಕನ್ನಡದಲ್ಲೇ ಹೆಚ್ಚು ಬಿಜಿಯಿದ್ದೆ. ಬೆಂಗಳೂರಿನಲ್ಲೇ ಚಿತ್ರೀಕರಣ ಇದ್ದರೆ ಸಮಸ್ಯೆ ಇಲ್ಲ. "ಸಂಗೀತಾ ಬಾರ್​ ಆ್ಯಂಡ್​ ರೆಸ್ಟೋರೆಂಟ್​' ಚಿತ್ರೀಕರಣ 25 ದಿನಗಳ ಕಾಲ ಕುಂದಾಪುರದಲ್ಲಿತ್ತು. ಮಲಯಾಳಂನ "ಒಟ್ಟಕೊಂಬನ್​' ಶೂಟಿಂಗ್​ ಕೇರಳದಲ್ಲಿ 30 ದಿನ ಇತ್ತು. ಹೀಗೆ ದೂರ ಹೋದ ಸಮಯದಲ್ಲಿ ರಾಯನ್​ಗೆ ಸಮಯ ಕೊಡಲಾಗುವುದಿಲ್ಲ. ಆ ಬೇಸರ ಅವನಿಗೆ ಈಗಲೇ ಅರ್ಥವಾಗದಿದ್ದರೂ, ನನಗಂತೂ ಇದೆ. ಹೀಗಾಗಿಯೇ ನಾನೂ ಸಿನಿಮಾದಿಂದ ಗ್ಯಾಪ್​ ತೆಗೆದುಕೊಂಡಿದ್ದೆ. ಈಗೀಗ ರಾಯನ್​ಗೂ ಅಭ್ಯಾಸವಾಗಿದೆ. ದಿನಕ್ಕೆ 20ರಿಂದ 25 ಬಾರಿ ವಿಡಿಯೋ ಕಾಲ್​ ಮಾಡುತ್ತೇನೆ. ವಾಪಸ್​ ಬರುವಾಗ ಏನಾದರೂ ಗಿಫ್ಟ್​ ತರಬೇಕು ಎನ್ನುತ್ತಿರುತ್ತಾನೆ' ಎಂದು ನಗುತ್ತಾರೆ.

ಕನ್ನಡದಲ್ಲೂ ವೆಬ್​ಸರಣಿಗಳು ಬರಬೇಕು

ಮೇಘನಾಗೆ ವೆಬ್​ಸರಣಿಗಳಲ್ಲೂ ಅವಕಾಶಗಳು ಬಂದಿವೆಯಂತೆ. ಆದರೆ, "ನನಗೆ ಮತ್ತು ವೀಕ್ಷಕರಿಗೂ ಇಷ್ಟವಾಗುವ ಕಂಟೆಂಟ್​ನಲ್ಲಿ ನಟಿಸಬೇಕು ಅಂತ ಆಸೆ ಇದೆ. ಹೀಗಾಗಿ ಒಪ್ಪಿಲ್ಲ. ತಮಿಳು, ತೆಲುಗಿನಲ್ಲಿ ಸರಣಿಗಳು ಬರುತ್ತಿವೆ. ಹಾಗೇ ಕನ್ನಡದಲ್ಲೂ ಹೆಚ್ಚಾಗಬೇಕು. ನಾವು ಕಂಟೆಂಟ್​ ಕೊಟ್ಟರೆ ಜನ ನೋಡುತ್ತಾರೆ. ನಾವು ಕೊಡದೇ ಜನ ನೋಡುವುದಿಲ್ಲ ಅಂದರೆ ತಪ್ಪು. ಒಳ್ಳೊಳ್ಳೆ ನಿರ್ದೇಶಕರಿದ್ದಾರೆ. ಅವರನ್ನು ಉಪಯೋಗಿಸಿಕೊಂಡು ನಿರ್ಮಾಪಕರು ವೆಬ್​ಸರಣಿಗಳನ್ನೂ ಮಾಡಬಹುದು. ಅದಕ್ಕೆ ತಕ್ಕಂತೆ ಒಟಿಟಿಯವರೂ ಕನ್ನಡ ಕಂಟೆಂಟ್​ಗೂ ಪ್ರಾಮುಖ್ಯ ನೀಡಬೇಕು' ಎನ್ನುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net