

ಶಿವ ಸ್ಥಾವರಮಠ, ಬೆಂಗಳೂರು
‘ಸಪ್ತಸಾಗರದಾಚೆ ಎಲ್ಲೋ’ ಸರಣಿ, ‘ಟೋಬಿ’ ನಟಿ ಚೈತ್ರಾ ಜೆ. ಆಚಾರ್ ಸ್ಯಾಂಡಲ್ವುಡ್ ಜತೆಗೆ ಪರಭಾಷೆಗಳಲ್ಲೂ ಮಿಂಚುತ್ತಿದ್ದಾರೆ. ಸದ್ಯ ತಮಿಳು, ತೆಲುಗು ಚಿತ್ರರಂಗದಲ್ಲಿ ಕಮಾಲ್ ಮಾಡುತ್ತಿರುವ ಅವರು ಎರಡು ಬಹುನಿರೀಕ್ಷಿತ ಚಿತ್ರದ ಭಾಗವಾಗಿದ್ದಾರೆ. ‘3 ಬಿಎಚ್ಕೆ’ (2025) ಮೂಲಕ ಕಾಲಿವುಡ್ಗೆ ಕಾಲಿಟ್ಟ ಚೈತ್ರಾ ಬಳಿಕ ‘ಮೈ ಲಾರ್ಡ್’, ‘ಮೀಸಯ ಮುರುಕ್ಕು 2’ ಚಿತ್ರಗಳಲ್ಲಿ ನಟಿಸಿದ್ದರು. ಇದೀಗ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ತಮಿಳಿನ ‘ಇಂಜಿ ವೆಲ್ಲಂ’ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 2027ರ ಜ. 29ರಂದು ಸಿನಿಮಾ ರಿಲೀಸ್ ಆಗಲಿದ್ದು, ಈ ಹಿನ್ನೆಲೆಯಲ್ಲಿ ಚೈತ್ರಾ ಆಚಾರ್ ಸಿನಿಮಾ ಜರ್ನಿ ಬಗ್ಗೆ ‘ವಿಜಯವಾಣಿ’ ಜತೆ ಹಂಚಿಕೊಂಡರು. ‘‘ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ’ ಚಿತ್ರ ನೋಡಿದ್ದ ಮಣಿರತ್ನಂ ಸರ್ ನನ್ನ ಸುರಭಿ ಪಾತ್ರವನ್ನು ಮೆಚ್ಚುಕೊಂಡಿದ್ದರು. ಅದಕ್ಕೂ ಮುನ್ನ ಅವರ ನಿರ್ದೇಶನದ ಒಂದು ಸಿನಿಮಾ ಮಾತುಕತೆಯಾಗಿತ್ತು. ಆದರೆ, ಅದು ಟೇಕಾಫ್ ಆಗಲಿಲ್ಲ. ಬಳಿಕ ‘ಇಂಜಿ ವೆಲ್ಲಂ’ಗೆ ಮುಂದಾದಾಗ ಅವರ ತಂಡದವರು ನನ್ನನ್ನು ಸಂಪರ್ಕಿಸಿದರು. ಮಣಿರತ್ನಂ ಸರ್ ಚಿತ್ರದ ಭಾಗವಾಗುವುದು ಪ್ರತಿ ಕಲಾವಿದರ ಕನಸು. ಹೀಗಿರುವಾಗ ಆ ಅದೃಷ್ಟ ನನ್ನ ಮನೆ ಬಾಗಿಲಿಗೆ ಬಂದಿತ್ತು. ಪಾತ್ರ, ಕಥೆ ಏನೂ ಕೇಳದೆ ಕೂಡಲೇ ಒಪ್ಪಿಕೊಂಡೆ. ಮರದ ಪಾತ್ರ ಕೊಟ್ಟಿದ್ದರೂ ನಾನು ನಿರ್ವಹಿಸಲು ಸಿದ್ಧಳಿದ್ದೆ. ‘ಇಂಜಿ ವೆಲ್ಲಂ’ನಲ್ಲಿ ನನ್ನದು ವಿಶೇಷ ಪಾತ್ರ. ಆದರೆ, ಈಗಲೇ ಪಾತ್ರ, ಕಥೆಯ ಬಗ್ಗೆ ಬಹಿರಂಗಪಡಿಸುವಂತಿಲ್ಲ. ತುಂಬಾ ಚೆನ್ನಾಗಿ ಮೂಡಿಬಂದಿದೆ. ವಿಜಯ್ ಸೇತುಪತಿ, ಸಾಯಿಪಲ್ಲವಿ ಅಂತಹ ಘಟಾನುಘಟಿ ಕಲಾವಿದರ ಜತೆ ತೆರೆ ಹಂಚಿಕೊಳ್ಳುತ್ತಿರುವುದು ಸೌಭಾಗ್ಯ. ಯಾವುದೇ ಹಮ್ಮುಬಿಮ್ಮು ಇಲ್ಲದೇ ಇಬ್ಬರು ಹಂಬಲ್ ಆಗಿ ನಮ್ಮ ಜತೆ ಇರುತ್ತಿದ್ದರು. ಒಂದು ಹಂತಕ್ಕೆ ತಮಿಳು ಮಾತನಾಡಬಲ್ಲೆ ಹಾಗೂ ಅರ್ಥೈಸಿಕೊಳ್ಳಬಲ್ಲೆ. ಇನ್ನಷ್ಟು ಕಲಿಯುತ್ತಿದ್ದೇನೆ. ಈ ಚಿತ್ರಕ್ಕೆ ಡಬ್ ನಾನೇ ಮಾಡಲಿದ್ದೇನೆ’ ಎಂದು ಮಾಹಿತಿ ನೀಡಿದರು.
‘418’ ಮೂಲಕ ಇದೇ ಅಕ್ಟೋಬರ್ನಲ್ಲಿ ಟಾಲಿವುಡ್ಗೆ ಪದಾರ್ಪಣೆ ಮಾಡಿರುವ ಚೈತ್ರಾ ಇದೀಗ ಪ್ರಭಾಸ್ ನಟನೆಯ ‘ಫೌಜಿ’ಯ ಭಾಗವಾಗಿದ್ದಾರೆ. ಒಪ್ಪಂದದ ಪ್ರಕಾರ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳುವಂತಿಲ್ಲ ಎಂದ ಅವರು, ಪ್ರಭಾಸ್ ಒಡನಾಟವನ್ನು ನೆನಪಿಸಿಕೊಂಡು, ‘ಪ್ರಭಾಸ್ ಅವರದು ಸರಳ ವ್ಯಕ್ತಿತ್ವ. ಸಹ ಕಲಾವಿದರ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಅವರ ಮನೆಯ ಊಟದ ಭಾಗ್ಯ ನನಗೆ ಸಿಗಲಿಲ್ಲ. ಆದರೆ, ಒಂದು ದಿನ ಕಠಿಣ ಭಾಗದ ಶೂಟ್ನಿಂದಾಗಿ ಎಲ್ಲರೂ ದಣಿದಿದ್ದೆವು. ಅಂದು ನನಗೆ ಎಂಟು ಬಗೆಯ ಐಸ್ಕ್ರೀಂ ಕೊಡಿಸಿದ್ದರು’ ಎಂದು ಸ್ಮರಿಸಿದರು. ಜತೆಗೆ ಕನ್ನಡದ ‘ಲೈಲಾಸ್ ಸ್ವೀಟ್ ಡ್ರೀಮ್’ನಲ್ಲಿ ನಟಿಸುತ್ತಿರುವ ಚೈತ್ರಾ ಹಲವು ಕಥೆಗಳನ್ನು ಕೇಳಿದ್ದು, ಒಂದನ್ನು ಫೈನಲ್ ಮಾಡಿದ್ದಾರೆ. ಇನ್ನು ಕಲಾವಿದರಿಗೆ ಯಾವುದೇ ಗಡಿಯಿಲ್ಲ ಎನ್ನುವ ಚೈತ್ರಾ, ‘ಒಳ್ಳೆಯ ಕಥೆಗಳು ಬಂದರೆ ಭೋಜಪುರಿ ಕಲಿತು ಅಲ್ಲಿಯೂ ನಟಿಸುವೆ’ ಎಂದು ಹೇಳಿಕೊಳ್ಳುತ್ತಾರೆ.