Rishi Nagaraju - ಇಲ್ಲೂ ಹ್ಯಾಟ್ರಿಕ್​, ಅಲ್ಲೂ ಹ್ಯಾಟ್ರಿಕ್​!

ರಿಷಿ ನಾಗರಾಜು
ರಿಷಿ ನಾಗರಾಜು
Published on
Rishi Nagaraju - "ಆಪರೇಷನ್​ ಅಲಮೇಲಮ್ಮ', "ಕವಲುದಾರಿ' ಖ್ಯಾತಿಯ ರಿಷಿ ಕಳೆದ ವರ್ಷ ಕನ್ನಡದ "ರುದ್ರ ಗರುಡ ಪುರಾಣ'ದಲ್ಲಿ ನಾಯಕನಾಗಿ, ತೆಲುಗಿನ "ಡಾಕು ಮಹಾರಾಜ್​'ನಲ್ಲಿ ಖಳನಾಯಕನಾಗಿ ಮಿಂಚಿದ್ದರು. ಈ ಎರಡು ಚಿತ್ರಗಳೂ 2025ರ ಜನವರಿಯಲ್ಲೇ ರಿಲೀಸ್​ ಆಗಿದ್ದವು. ಆ ಬಳಿಕ ಕಳೆದ ಒಂದು ವರ್ಷದಿಂದ ರಿಷಿಯ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಹಾಗಂತ ಅವರು ಬ್ರೇಕ್​ ತೆಗೆದುಕೊಂಡಿಲ್ಲ. ಬದಲಾಗಿ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡ ಮತ್ತು ತೆಲುಗಿನಲ್ಲಿ ತಲಾ ಮೂರು ಚಿತ್ರಗಳು ಚಿತ್ರೀಕರಣದ ವಿವಿಧ ಹಂತಗಳಲ್ಲಿದ್ದು, ಈ ವರ್ಷ ಕನಿಷ್ಠ ಮೂರು ಸಿನಿಮಾಗಳು ತೆರೆಗೆ ಬರುವ ನಿರೀಕ್ಷೆ ಇದೆ. ಕನ್ನಡದಲ್ಲಿ "ಜವರ', "ಮಂಗಳಾಪುರಂ' ಚಿತ್ರಗಳ ಜತೆಗೆ ಇತ್ತೀಚೆಗಷ್ಟೆ "ಅನಂತ ಪದ್ಮನಾಭ' ಘೋಷಣೆಯಾಗಿದೆ. ಹಾಗೇ ತೆಲುಗಿನಲ್ಲಿ "ಭಗವಂತುಡು' ಜತೆಗೆ ಇನ್ನೂ ಹೆಸರಿಡದ ಎರಡು ಚಿತ್ರಗಳಲ್ಲಿ ರಿಷಿ ನಟಿಸುತ್ತಿದ್ದಾರೆ.
ಕನ್ನಡದ ಮೂರು ಚಿತ್ರಗಳು
ಸಂಭಾಷಣೆಕಾರ ಪ್ರಶಾಂತ್​ ರಾಜಪ್ಪ ನಿರ್ದೇಶನದಲ್ಲಿ ರಿಷಿ ಹೊಸ ಸಿನಿಮಾ ಘೋಷಣೆಯಾಗಿದೆ. ಹೆಸರು "ಅನಂತ ಪದ್ಮನಾಭ'. ರಿಷಿ ಜತೆ ಈ ಚಿತ್ರದಲ್ಲಿ ಹಿರಿಯ ನಟ ಪ್ರಕಾಶ್​ ಬೆಳವಾಡಿ ಕೂಡ ಮುಖ್ಯ ಭೂಮಿಕೆಯಲ್ಲಿದ್ದಾರೆ. "ಎರಡು ಹಾಡುಗಳನ್ನು ಹೊರತುಪಡಿಸಿ, ಚಿತ್ರದ ಬಹುತೇಕ ಶೂಟಿಂಗ್​ ಪೂರ್ಣಗೊಂಡಿದೆ. ಸದ್ಯ ಡಬ್ಬಿಂಗ್​ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಚಿತ್ರದ ರಿಲೀಸ್​ ದಿನಾಂಕ ಅನೌನ್ಸ್​ ಮಾಡಲಿದ್ದೇವೆ. "ಅನಂತ ಪದ್ಮನಾಭ' ಔಟ್​ ಆ್ಯಂಡ್​ ಔಟ್​ ಟ್ರಾವಲ್​ ಎಂಟರ್​ಟೇನರ್​. ನನ್ನ ಮತ್ತು ಪ್ರಕಾಶ್​ ಸರ್​ ಪಾತ್ರಗಳ ಮೇಲೆ ಕಥೆ ಸಾಗುತ್ತದೆ' ಎಂದು ಮಾಹಿತಿ ನೀಡುತ್ತಾರೆ ರಿಷಿ. ಎಲ್ಲವೂ ಅಂದುಕೊಂಡಂತಾದರೆ ಈ ಸಿನಿಮಾ ಇದೇ ಬೇಸಗೆ ರಜೆಯಲ್ಲಿ ತೆರೆಗೆ ಬರಲಿದೆ. ಅದರ ಜತೆಜತೆಗೆ ರಿಷಿ ಕನ್ನಡದಲ್ಲಿ "ಯಲಾ ಕುನ್ನಿ' ನಿರ್ದೇಶಕ ದೀಪಕ್​ ದಳವಾಯ್​ ಆ್ಯಕ್ಷನ್​&ಕಟ್​ ಹೇಳುತ್ತಿರುವ "ಜವರ' ಮತ್ತು ರಂಜಿತ್​ ರಾಜ್​ ಸುವರ್ಣ ನಿರ್ದೇಶಿಸುತ್ತಿರುವ "ಮಂಗಳಾಪುರಂ' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
ನಾಯಕ & ಖಳನಾಯಕ
ಈಗಾಗಲೇ "ಶೈತಾನ್​' ವೆಬ್​ಸರಣಿ ಮತ್ತು ಬಾಲಯ್ಯ ನಾಯಕನಾಗಿದ್ದ "ಡಾಕು ಮಹರಾಜ್​' ಚಿತ್ರದಲ್ಲಿ ಖಡಕ್​ ವಿಲನ್​ಆಗಿ ಮಿಂಚಿದ್ದ ರಿಷಿ, ಇದೀಗ ತೆಲುಗಿನಲ್ಲೂ ಹ್ಯಾಟ್ರಿಕ್​ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಹೈದರಾಬಾದ್​ನಲ್ಲಿರುವ ಅವರು ಸದ್ಯ ಇನ್ನೂ ಹೆಸರಿಡದ ಟಾಲಿವುಡ್​ ಚಿತ್ರದ ಕ್ಲೆಮ್ಯಾಕ್ಸ್​ ಶೂಟಿಂಗ್​ನಲ್ಲಿ ಬಿಜಿಯಾಗಿದ್ದಾರೆ. ಅದರ ಜತೆಗೆ "ಭಗವಂತುಡು' ಎಂಬ ತೆಲುಗಿನ ಇನ್ನೊಂದು ಸಿನಿಮಾದಲ್ಲೂ ಅವರು ಕಾಣಿಸಿಕೊಳ್ಳಲಿದ್ದಾರೆ. ಹಾಗೇ ಅವರು ನಾಯಕನಾಗಿ ಡೆಬ್ಯೂ ಮಾಡುತ್ತಿರುವ ಹೊಸ ತೆಲುಗು ಚಿತ್ರದ ಶೂಟಿಂಗ್​ ಇದೇ ಏಪ್ರಿಲ್​ ಅಥವಾ ಮೇ ತಿಂಗಳಲ್ಲಿ ಪ್ರಾರಂಭವಾಗಲಿದೆಯಂತೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net