Rishi Nagaraju - "ಆಪರೇಷನ್ ಅಲಮೇಲಮ್ಮ', "ಕವಲುದಾರಿ' ಖ್ಯಾತಿಯ ರಿಷಿ ಕಳೆದ ವರ್ಷ ಕನ್ನಡದ "ರುದ್ರ ಗರುಡ ಪುರಾಣ'ದಲ್ಲಿ ನಾಯಕನಾಗಿ, ತೆಲುಗಿನ "ಡಾಕು ಮಹಾರಾಜ್'ನಲ್ಲಿ ಖಳನಾಯಕನಾಗಿ ಮಿಂಚಿದ್ದರು. ಈ ಎರಡು ಚಿತ್ರಗಳೂ 2025ರ ಜನವರಿಯಲ್ಲೇ ರಿಲೀಸ್ ಆಗಿದ್ದವು. ಆ ಬಳಿಕ ಕಳೆದ ಒಂದು ವರ್ಷದಿಂದ ರಿಷಿಯ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಹಾಗಂತ ಅವರು ಬ್ರೇಕ್ ತೆಗೆದುಕೊಂಡಿಲ್ಲ. ಬದಲಾಗಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡ ಮತ್ತು ತೆಲುಗಿನಲ್ಲಿ ತಲಾ ಮೂರು ಚಿತ್ರಗಳು ಚಿತ್ರೀಕರಣದ ವಿವಿಧ ಹಂತಗಳಲ್ಲಿದ್ದು, ಈ ವರ್ಷ ಕನಿಷ್ಠ ಮೂರು ಸಿನಿಮಾಗಳು ತೆರೆಗೆ ಬರುವ ನಿರೀೆ ಇದೆ. ಕನ್ನಡದಲ್ಲಿ "ಜವರ', "ಮಂಗಳಾಪುರಂ' ಚಿತ್ರಗಳ ಜತೆಗೆ ಇತ್ತೀಚೆಗಷ್ಟೆ "ಅನಂತ ಪದ್ಮನಾಭ' ಘೋಷಣೆಯಾಗಿದೆ. ಹಾಗೇ ತೆಲುಗಿನಲ್ಲಿ "ಭಗವಂತುಡು' ಜತೆಗೆ ಇನ್ನೂ ಹೆಸರಿಡದ ಎರಡು ಚಿತ್ರಗಳಲ್ಲಿ ರಿಷಿ ನಟಿಸುತ್ತಿದ್ದಾರೆ.