ನಟ ರಮೇಶ್ ಅರವಿಂದ್ 40 ವರ್ಷ ಮೀರಿದ ಲಾಂಗೆಸ್ಟ್ ಸಿನಿಜರ್ನಿಯಲ್ಲಿ ಮೊದಲ ಬಾರಿ ಲಾಂಗ್ ಹಿಡಿದಿರುವ ಸಿನಿಮಾ "ಕೆಡಿ - ದ ಡೆವಿಲ್'. ಅವರಿಲ್ಲಿ "ಧರ್ಮ' ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಬಲಗೈಲಿ ಹ್ಯಾಂಡಲ್ ಹಿಡಿದು ಬಜಾಜ್ ಚೇತಕ್ ಸ್ಕೂಟರ್ ಓಡಿಸುತ್ತಾ, ಎಡಗೈಲಿ ಲಾಂಗ್ ಹಿಡಿದಿರುವ ಲುಕ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇತ್ತೀಚೆಗಷ್ಟೆ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದ ಅವರು, "ಪ್ರೇಮ್ ಮೊದಲ ಬಾರಿ ಕಥೆ ಹೇಳಿದಾಗ, ನಾನು ಕಳೆದ 15, 20 ವರ್ಷಗಳಿಂದ ನಾಯಕನ ಪಾತ್ರವನ್ನಷ್ಟೇ ಮಾಡುತ್ತಾ ಬಂದಿದ್ದೇನೆ. ಬೇರೆ ಪಾತ್ರ ಮಾಡಿಲ್ಲ. ಬೇರೆ ರೀತಿಯ ಪಾತ್ರದಲ್ಲಿ ನಟಿಸಲೂ ನನಗಿಷ್ಟವಿಲ್ಲ. ನನ್ನ ಮನಸ್ಸು ಒಪ್ಪುವುದಿಲ್ಲ ಎಂದೆ. ಆದರೆ, ಪ್ರೇಮ್ ನೀವೇ ಈ ಪಾತ್ರ ಮಾಡಬೇಕು ಎಂದು ಹಠ ಹಿಡಿದರು. ನನ್ನ ಕೆಲ ಕಂಡೀಷನ್ಗಳಿದ್ದವು. ಅದಕ್ಕೆ ಒಪ್ಪಿದರು. ಹೀಗಾಗಿ ನಟಿಸಿದೆ. ನಾನಿಲ್ಲಿ ಧರ್ಮ ಎಂಬ ಪಾತ್ರದಲ್ಲಿ ನಟಿಸಿದ್ದೇನೆ. ಇಂತಹ ಪಾತ್ರಗಳು ಶುರುವಾದರೆ ಚೆನ್ನಾಗಿರುತ್ತದೆ. ಪ್ರೇಕ್ಷಕರಿಗೆ ಮಾತ್ರವಲ್ಲ, ಕಲಾವಿದರಿಗೂ ಹೊಸ ಪಾತ್ರ ಬೇಕು. ನಾವು ಕಲಾವಿದರು ಎಂತಹ ಪಾತ್ರ ಮಾಡಲೂ ರೆಡಿ. ಹೊಸ ಪಾತ್ರ ಸಿಗುತ್ತಾ ಅಂತ ನಾನಂತೂ ಕಾಯುತ್ತಿರುತ್ತೇನೆ. ಅದಕ್ಕೆ ತಕ್ಕಂತೆ ಕಥೆಗಾರರು ಮತ್ತು ನಿರ್ದೇಶಕರು, ಬೇರೆ ಬೇರೆ ರೀತಿಯಲ್ಲಿ ಕಲ್ಪಿಸಿಕೊಂಡು ಪಾತ್ರಗಳನ್ನು ಬರೆದರೆ, ನಮ್ಮಂತಹ ಕಲಾವಿದರಿಗೆ ಬಹಳ ಇಷ್ಟ. ನಟರು, ನಿರ್ದೇಶನಕ್ಕೆ ಮುಂದಾದಾಗ ಯಾಕೆ ಡೈರೆಕ್ಷನ್ ಎಂದು ಕೇಳುತ್ತಾರಲ್ಲಾ? ಅದಕ್ಕೆ ಕಾರಣವೇ ಇದು. ನಾವು ಎದುರು ನೋಡುತ್ತಿರುವ ಪಾತ್ರ ಸಿಗದಿದ್ದಾಗ, ನಾವೇ ಆ ಪಾತ್ರ ಸೃಷ್ಟಿಸಲು ಮುಂದಾಗುತ್ತೇವೆ' ಎಂದು ಮಾಹಿತಿ ನೀಡುತ್ತಾರೆ.