‘ಅಶೋಕ’ನ ಅಂತರಂಗ-ಬಹಿರಂಗ : ಸತೀಶ್ ನೀನಾಸಂ ನಟನೆಯ ಬಹುನಿರೀಕ್ಷಿತ ಚಿತ್ರ ಈ ವಾರ ತೆರೆಗೆ

ಸತೀಶ್ ನೀನಾಸಂ
ಸತೀಶ್ ನೀನಾಸಂ
Published on

ಪ್ರಮುಖ ಮುಖ್ಯಾಂಶಗಳು

  • ಕ್ರಾಂತಿಕಾರಿ ಯುವಕನ ಹೋರಾಟ, ಬದುಕು, ಸಂಘರ್ಷದ ಕಥೆ
  • ಅಶೋಕ ಚಿತ್ರಕ್ಕಾಗಿ ಸಮರ್ಪಣೆಯಿಂದ ಕೆಲಸ ಮಾಡಿದ ನಟ
  • ಕನ್ನಡ, ತೆಲುಗು, ತಮಿಳಿನಲ್ಲಿ ಸಿನಿಮಾ ರಿಲೀಸ್​
ಬೆಂಗಳೂರು : ‘ಮ್ಯಾಟ್ನಿ’ ಬಿಡುಗಡೆಯಾಗಿ ಎರಡು ವರ್ಷಗಳ ಬಳಿಕ ನಟ ನೀನಾಸಂ ಸತೀಶ್ ‘ದ ರೈಸ್ ಆಫ್​ ಅಶೋಕ’ ಮೂಲಕ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಸಾಕಷ್ಟು ಅಡೆತಡೆ, ಆರ್ಥಿಕ ಸಂಕಷ್ಟ ಸೇರಿ ನಾನಾ ರೀತಿಯ ಸವಾಲುಗಳನ್ನು ಎದುರಿಸಿರುವ ‘ಅಶೋಕ’ನಿಗೆ ಕೊನೆಗೂ ಬಿಡುಗಡೆ ಭಾಗ್ಯ ದೊರೆತಿದೆ. ಇದೇ ಶುಕ್ರವಾರ (ಫೆ.27) ‘ದ ರೈಸ್ ಆಫ್ ಅಶೋಕ’ ರಿಲೀಸ್ ಆಗುತ್ತಿದೆ. ಸತೀಶ್ ನಟನೆಯ ಚಿತ್ರವೊಂದು ಇದೇ ಮೊದಲ ಬಾರಿಗೆ ಕನ್ನಡ ಸೇರಿ ತೆಲುಗು, ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ. ಬಿಡುಗಡೆ ಹಾದಿಯಲ್ಲಿ ಚಿತ್ರತಂಡ ಎದುರಿಸಿದ ಸವಾಲುಗಳ ಬಗ್ಗೆ ಸತೀಶ್, ‘‘ದ ರೈಸ್ ಆಫ್​ ಅಶೋಕ’ ಶೂಟಿಂಗ್ ನಡೆಯುವಾಗಲೇ ಹಲವು ಅಡೆತಡೆಗಳು ಎದುರಾದವು. ನಿರ್ದೇಶಕ ವಿನೋದ್ ಧೋಂಡಾಳೆ ನಿಧನರಾದರು. ಬಳಿಕ ಆರ್ಥಿಕ ಸಂಕಷ್ಟ, ತಾಂತ್ರಿಕ ತೊಡಕು ಸೇರಿ ಹಲವು ಸಮಸ್ಯೆಗಳನ್ನು ಎದುರಿಸಿದೆವು. ಈ ಸಿನಿಮಾ ಇಷ್ಟಕ್ಕೇ ಮುಗಿತು ಎಂದೆಲ್ಲಾ ಮಾತನಾಡಿಕೊಂಡಿದ್ದರು. ಆದರೆ, ನಮ್ಮ ತಂಡ ಅದನ್ನೇ ಸವಾಲಾಗಿ ತೆಗೆದುಕೊಂಡು ಮುನ್ನಡೆಯಿತು. ಇದೀಗ ಬಿಡುಗಡೆ ಹಂತಕ್ಕೆ ಬಂದಿದ್ದೇವೆ. ಇಡೀ ಪಯಣದ ಕಥೆ-ವ್ಯಥೆ ಎಲ್ಲವೂ ನಮ್ಮೊಳಗಿರಲಿ. ಚಿತ್ರ ಮಾತನಾಡಲಿ ಎಂದು ಸುಮ್ಮನಿದ್ದೇವೆ. ‘ದ ರೈಸ್ ಆಫ್ ಅಶೋಕ’ ಕನ್ನಡದ ಹೆಮ್ಮೆಯ ಸಿನಿಮಾ ಆಗಲಿದೆ. ಇದು 70ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಕ್ರಾಂತಿಕಾರಿ ಯುವಕನ ಹೋರಾಟ, ಬದುಕು, ಸಂಘರ್ಷ ಇಲ್ಲಿದೆ. ನಟನೆ, ಸಾಹಿತ್ಯ, ಗಾಯನ ಹಾಗೂ ನಿರ್ಮಾಣದ ಮೂಲಕ ನಾನು ತಂಡದ ಜತೆ ಕೈ ಜೋಡಿಸಿದ್ದೇನೆ. ಹೆಸರಿಗೆ ಮಾತ್ರ ನಾನು ನಾಯಕ. ಅಸಲಿಗೆ ಕಥೆಯೇ ಹೀರೋ. ಅದು ಬಿಟ್ಟರೆ ಸಪ್ತಮಿ ಗೌಡ ಮತ್ತೊಬ್ಬ ಹೀರೋ. ಇಡೀ ಸಿನಿಮಾ ದೇಸಿತನದಿಂದ ಕೂಡಿದ್ದು, ಸಾಕಷ್ಟು ಯುವ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ’ ಎಂದು ಮಾಹಿತಿ ನೀಡುತ್ತಾರೆ.

ತನು-ಮನ-ಧನ ಅರ್ಪಣೆ

ಎಲ್ಲ ಕ್ಷೇತ್ರದಲ್ಲೂ ಸೋಲು-ಗೆಲುವು ಸಾಮಾನ್ಯ. ಸ್ವೀಕಾರ ಮನೋಭಾವದಿಂದಲೇ ಸಾಗಬೇಕು ಎನ್ನುವ ಸತೀಶ್, ‘ನಮ್ಮ ಕೈಲಾದ ಶ್ರಮ ಹಾಕಿರುತ್ತೇವೆ. ಲಿತಾಂಶ ಮಾತ್ರ ನಮ್ಮ ಕೈಯಲ್ಲಿಲ್ಲ. ಹೀಗಾಗಿ, ಗೆಲುವನ್ನು ಅಪ್ಪಿಕೊಂಡಂತೆ ಸೋಲನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ, ‘ದ ರೈಸ್ ಆಫ್​ ಅಶೋಕ’ ಮೇಲೆ ನಂಬಿಕೆಯಿದೆ. ಇದಕ್ಕೆ ತನು-ಮನ-ಧನ ಅರ್ಪಿಸಿದ್ದೇನೆ. ಸದ್ಯಕ್ಕೆ ನನ್ನ ಹತ್ತಿರ ಇರುವ ಕಾರು ಹೊರತುಪಡಿಸಿ ಎಲ್ಲವನ್ನೂ ಚಿತ್ರಕ್ಕೆ ಧಾರೆ ಎರೆದಿದ್ದೇನೆ. ಅಲ್ಲದೇ ಈ ಚಿತ್ರಕ್ಕಾಗಿ ಹಲವು ಸಿನಿಮಾಗಳನ್ನು ಕೈಬಿಟ್ಟಿದ್ದೇನೆ’ ಎಂದು ಹೇಳಿಕೊಳ್ಳುತ್ತಾರೆ.

ಪರಭಾಷೆಯಲ್ಲಿ ಅಶೋಕನ ಹವಾ

‘ದ ರೈಸ್ ಅಫ್​ ಅಶೋಕ’ ಮೂರು ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಬಗ್ಗೆ ಸತೀಶ್, ‘ಚಿತ್ರವನ್ನು ತೆಲುಗು, ತಮಿಳಿಗೆ ತೆಗೆದುಕೊಂಡು ಹೋಗುತ್ತೇನೆ ಎಂದಾಗ ನನಗೆ ತಲೆಕೆಟ್ಟಿದೆ ಎಂದರು. ಹೌದು, ನನಗೆ ಸಿನಿಮಾ ಹುಚ್ಚು ಹಿಡಿದಿದೆ. ಗುಣಮಟ್ಟದ ಸಿನಿಮಾ ಮಾಡಿರುವ ಖುಷಿಯಿದೆ. ಹೀಗಾಗಿಯೇ ಪಕ್ಕದ ರಾಜ್ಯದವರಿಗೆ ಸಿನಿಮಾ ತೋರಿಸಲು ಧೈರ್ಯ ಮಾಡಿರುವುದು. ಅದೇ ನಿರ್ಧಾರದಿಂದಲೇ ಇಂದು ‘ಕೆಜಿಎಫ್​’, ‘ಕಾಂತಾರ’ ಬಳಿಕ ಪರಭಾಷೆಯಲ್ಲಿ ‘ದ ರೈಸ್ ಆಫ್​ ಅಶೋಕ’ ದೊಡ್ಡಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಎರಡು ರಾಜ್ಯಗಳಲ್ಲಿ ದೊಡ್ಡ ಮೊತ್ತಕ್ಕೆ ವಿತರಣೆ ಹಕ್ಕುಗಳು ಮಾರಾಟವಾಗಿವೆ. ಸೆನ್ಸಾರ್ ಮಂಡಳಿ ಕೂಡ ನಮ್ಮ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ’ ಎಂದು ಖುಷಿ ಹಂಚಿಕೊಳ್ಳುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net