ಟಾಕ್ಸಿಕ್​ ಚಿತ್ರದಿಂದ ಹೊರಬಂದಿದ್ದೇಕೆ? ವಿಜಯವಾಣಿಗೆ ಗುಲ್ಶನ್ ದೇವಯ್ಯ ಕೊಟ್ಟ ಸ್ಪಷ್ಟನೆ ಹೀಗಿದೆ ನೋಡಿ! Gulshan Devaiah

ನಟರಾದ ಯಶ್​ ಹಾಗೂ ಗುಲ್ಶನ್​ ದೇವಯ್ಯ
ನಟರಾದ ಯಶ್​ ಹಾಗೂ ಗುಲ್ಶನ್​ ದೇವಯ್ಯ
Published on

ಪ್ರಮುಖ ಮುಖ್ಯಾಂಶಗಳು

  • ಕಾಂತಾರ ಚಾಪ್ಟರ್​ 1 ಸಿನಿಮಾದ ಬಳಿಕ ಕರ್ನಾಟಕದಲ್ಲಿ ಮನೆ ಮಾತಾದ ಕನ್ನಡಿಗ ಗುಲ್ಶನ್​ ದೇವಯ್ಯ
  • ರಾಕಿಂಗ್​ ಸ್ಟಾರ್​ ಯಶ್​ ನಟನೆಯ ಬಹುನಿರೀಕ್ಷಿತ ಟಾಕ್ಸಿಕ್​ ಚಿತ್ರದಲ್ಲೂ ಗುಲ್ಶನ್​ ನಟಿಸಬೇಕಿತ್ತು
  • ಶೂಟಿಂಗ್​ ಮಧ್ಯದಲ್ಲೇ ಟಾಕ್ಸಿಕ್​ ಸಿನಿಮಾದಿಂದ ಹೊರಬಂದಿದ್ದೇಕೆ ಎಂಬುದಕ್ಕೆ ಕಾರಣ ಬಿಚ್ಚಿಟ್ಟ ಗುಲ್ಶನ್​
ಮುಂಬೈ: ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿ ನಿರ್ದೇಶಿಸಿ, ನಟಿಸಿದ ಕಾಂತಾರ ಚಾಪ್ಟರ್​ 1 ಸಿನಿಮಾದಲ್ಲಿ ಖಳನಾಯಕನಾಗಿ ತಮ್ಮ ಅದ್ಭುತ ಅಭಿನಯದ ಮೂಲಕ ಕನ್ನಡಿಗ ಗುಲ್ಶನ್​ ದೇವಯ್ಯ ( Gulshan Devaiah ) ಕರ್ನಾಟಕದಲ್ಲಿ ಮನೆ ಮಾತಾತಾಗಿದ್ದಾರೆ. ಎಲ್ಲವು ಅಂದುಕೊಂಡಂತೆ ನಡೆದಿದ್ದರೆ, ರಾಕಿಂಗ್​ ಸ್ಟಾರ್​ ಯಶ್​ ನಟನೆಯ ಬಹುನಿರೀಕ್ಷಿತ ಟಾಕ್ಸಿಕ್​ ಚಿತ್ರದಲ್ಲೂ ಗುಲ್ಶನ್​ ನಟಿಸಬೇಕಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣ ಏನೆಂಬುದನ್ನು ಕೊನೆಗೂ ಬಹಿರಂಗಪಡಿಸಿದ್ದಾರೆ.
ವಿಜಯವಾಣಿ ಜತೆ ಮಾತನಾಡಿದ ಗುಲ್ಶನ್ ದೇವಯ್ಯ, ಡೇಟ್ಸ್​ ಹೊಂದಾಣಿಕೆ ಕಾರಣದಿಂದ ನಾನು ಟಾಕ್ಸಿಕ್​ ಸಿನಿಮಾದಲ್ಲಿ ನಟಿಸಲು ಆಗಲಿಲ್ಲ. ಯಶ್​ ಅವರು ನನ್ನನ್ನು ಸಂಪರ್ಕ ಮಾಡಲಿಲ್ಲ. ನಿರ್ದೇಶಕಿ ಗೀತು ಮೋಹನ್​ ದಾಸ್​ ಅವರು ನನ್ನನ್ನು ಸಂಪರ್ಕಿಸಿ, ಒಂದು ಪಾತ್ರ ಇದೆ ಮಾಡ್ತೀರಾ ಅಂತ ಕೇಳಿದರು. ಆದರೆ, ನನಗೆ ಡೇಟ್ಸ್​ ಇಲ್ಲದ ಕಾರಣ ನಟಿಸಲು ಆಗುವುದಿಲ್ಲ ಎಂದು ಹೇಳಿದೆ ಎಂದು​ ತಿಳಿಸಿದರು. 

ಸುಳ್ಳು ಸುದ್ದಿ

ಟಾಕ್ಸಿಕ್​ ಸಿನಿಮಾ ತಂಡ ದುಡ್ಡು ಕೊಡಲಿಲ್ಲ ಮತ್ತು ಮ್ಯಾನೇಜರ್​ ಜತೆ ಕೆಟ್ಟದಾಗಿ ನಡೆದುಕೊಂಡಿದ್ದಕ್ಕೆ ಟಾಕ್ಸಿಕ್​ ಸಿನಿಮಾದಿಂದ ಗುಲ್ಶನ್​ ದೇವಯ್ಯ ಅವರು ಹೊರಬಂದರು ಅಂತಾ ಸುಳ್ಳು ಸುದ್ದಿಯೊಂದು ಹರಿದಾಡುತ್ತಿದೆ. ರಾಷ್ಟ್ರೀಯ ಇಂಗ್ಲಿಷ್​ ವಾಹಿನಿಯೊಂದು ಸುದ್ದಿ ಮಾಡಿದ ಬಳಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಯಾಗಿತ್ತು. ಈ ವಿಚಾರವಾಗಿ ವಿಜಯವಾಣಿ ಜತೆ ಮಾತನಾಡಿದ ಗುಲ್ಶನ್​ ಅವರು ಅದೆಲ್ಲ ಸುಳ್ಳು ಸುದ್ದಿ, ಡೇಟ್​ ಹೊಂದಾಣಿಕೆ ಸಮಸ್ಯೆಯಿಂದ ಟಾಕ್ಸಿಕ್​ನಲ್ಲಿ ನಟಿಸಲು ಆಗಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. 
ಅಂದಹಾಗೆ, ಟಾಕ್ಸಿಕ್​ ಸಿನಿಮಾ ವಿಚಾರಕ್ಕೆ ಬರುವುದಾದರೆ, ಕೆಜಿಎಫ್: ಚಾಪ್ಟರ್​ 2 ಯಶಸ್ಸಿನ ಬಳಿಕ ಯಶ್ ಅವರ ಬಹುನಿರೀಕ್ಷಿತ ಸಿನಿಮಾ ಇದಾಗಿದೆ. ಸುಮಾರು 3 ವರ್ಷಗಳ ಬಳಿಕ ಯಶ್​ ಅವರು ಮತ್ತೆ ದೊಡ್ಡ ಪರದೆಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಸಿನಿಮಾ ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ತಯಾರಾಗುತ್ತಿದ್ದು, ಹಲವಾರು ಭಾರತೀಯ ಭಾಷೆಗಳಲ್ಲೂ ಡಬ್ ಆಗಿ ಬಿಡುಗಡೆಯಾಗಲಿದೆ.
ಇನ್ನು ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ, ನಯನತಾರಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಯಶ್ ಮತ್ತು ಗೀತು ಮೋಹನ್​ದಾಸ್​ ಬರೆದಿರುವ ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್‌ಗಳ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ಮತ್ತು ಯಶ್ ನಿರ್ಮಿಸಿದ್ದಾರೆ.
ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್ 2026, ಮಾರ್ಚ್ 19 ರಂದು ಈದ್, ಯುಗಾದಿ ಹಬ್ಬದ ವಾರಾಂತ್ಯದೊಂದಿಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net