ಗೋಲ್ಡನ್ @ 20 : ಕನ್ನಡ ಚಿತ್ರರಂಗ ಕಾಲಿಟ್ಟು 20 ವರ್ಷಗಳ ಸಂಭ್ರಮದಲ್ಲಿ ನಟ ಗಣೇಶ್

ಕೇಕ್ ಕತ್ತರಿಸಿ ಸಂಭ್ರಮಿಸಿದ ನಟ ಗಣೇಶ್​
ಕೇಕ್ ಕತ್ತರಿಸಿ ಸಂಭ್ರಮಿಸಿದ ನಟ ಗಣೇಶ್​
Published on

ಪ್ರಮುಖ ಮುಖ್ಯಾಂಶಗಳು

  • ಚೆಲ್ಲಾಟ ಚಿತ್ರದ ಮೂಲಕ ನಾಯಕನಟನಾಗಿದ್ದ ಗಣೇಶ್​
  • ಇದೇ 21ಕ್ಕೆ ಸಿನಿಮಾ ರಿಲೀಸ್ ಆಗಿ 20 ವರ್ಷ
  • ಪ್ರೇಕ್ಷಕರಿಗೆ, ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಸ್ಯಾಂಡಲ್ ವುಡ್ ನಟ
ಬೆಂಗಳೂರು : ನಟ ಗಣೇಶ್ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟು 20 ವರ್ಷಗಳು ಸಂದಿವೆ. ಕಿರುತೆರೆಯ ‘ಕಾಮಿಡಿ ಟೈಂ’ ಶೋನಿಂದ ಚಿರಪರಿಚಿತರಾಗಿದ್ದ ಅವರು, ಎಂ.ಡಿ.ಶ್ರೀಧರ್ ನಿರ್ದೇಶನದ ‘ಚೆಲ್ಲಾಟ’ ಚಿತ್ರದ ಮೂಲಕ ನಾಯಕನಟನಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದರು. ಈ ಚಿತ್ರವು 2006ರ ಏಪ್ರಿಲ್ 21ರಂದು ರಿಲೀಸ್ ಆಗಿತ್ತು. ಇದೀಗ ಈ ಚಿತ್ರ ತೆರೆಕಂಡು ಇದೇ 21ಕ್ಕೆ 20 ವರ್ಷಗಳು ಸಂದಿವೆ. ಈ ಹಿನ್ನೆಲೆಯಲ್ಲಿ ನಟ ಗಣೇಶ್ ಇತ್ತೀಚೆಗೆ ‘ಪಿನಾಕಾ’ ಚಿತ್ರದ ಶೂಟಿಂಗ್ ಸೆಟ್‌ನಲ್ಲಿ ಕೇಕ್ ಕತ್ತರಿಸಿ, ಸಂಭ್ರಮಿಸಿದ್ದಾರೆ. ಇಡೀ ಪಯಣವನ್ನು ನೆನೆದಿರುವ ಅವರು, ‘ಚಿತ್ರರಂಗಕ್ಕೆ ಬಂದು 20 ವರ್ಷಗಳಾದವು. ಅಂದು ನನ್ನನ್ನು ಹೇಗೆ ಸ್ವೀಕರಿಸಿದ್ದಿರೋ, ಅದೇ ಪ್ರೀತಿ ಮತ್ತು ವಿಶ್ವಾಸವನ್ನು ಇಂದಿಗೂ ಚಿತ್ರರಂಗದವರು ಹಾಗೂ ನನ್ನ ಅಭಿಮಾನಿಗಳು ತೋರಿಸುತ್ತಿದ್ದಾರೆ. ಕಾಲ ಉರುಳಿದರೂ ಅಭಿಮಾನಿ ಬಳಗ ದೊಡ್ಡದಾಗುತ್ತಿರುವುದು ನನ್ನ ಪುಣ್ಯ’ ಎಂದು ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ. ‘ಚೆಲ್ಲಾಟ’ ಬಳಿಕ ಗಣೇಶ್ ಅಭಿನಯದಲ್ಲಿ ಮೂಡಿಬಂದಿದ್ದ ‘ಮುಂಗಾರು ಮಳೆ’ ಚಿತ್ರವು ದೊಡ್ಡ ಮೈಲಿಗಲ್ಲು ಸಾಧಿಸಿತ್ತು. ಈ ಚಿತ್ರವು ಗಣೇಶ್‌ರನ್ನು ಎತ್ತರಕ್ಕೆ ಏರಿಸಿತ್ತು. ಈ ಎರಡು ದಶಕಗಳ ಸಿನಿ ಪಯಣದಲ್ಲಿ ಅವರು ‘ಗಾಳಿಪಟ’, ‘ಹುಡುಗಾಟ’, ‘ಚೆಲುವಿನ ಚಿತ್ತಾರ’, ‘ಅರಮನೆ’, ‘ಕೃಷ್ಣಂ ಪ್ರಣಯ ಸಖಿ’ ಸೇರಿ 40ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಬಂಗಾರದ ವರ್ಷ
ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ 20 ವರ್ಷಗಳು ಸಂದಿರುವ ನಟ ಗಣೇಶ್‌ಗೆ ಈ ವರ್ಷ ಬಂಗಾರದ ವರ್ಷ. ಸದ್ಯ ಅವರು ಬ್ಯಾಕ್ ಟು ಬ್ಯಾಕ್ ಚಿತ್ರಗಳ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದಾರೆ. ನೃತ್ಯ ನಿರ್ದೇಶಕ ಧನಂಜಯ್ ಆ್ಯಕ್ಷನ್-ಕಟ್ ಹೇಳುತ್ತಿರುವ ‘ಪಿನಾಕ’, ಎ.ಆರ್.ವಿಖ್ಯಾತ್ ನಿರ್ದೇಶನದ ‘ಯುವರ್ಸ್ ಸಿನ್ಸಿಯರ್ಲಿ ರಾಮ್’, ಅರಸು ಅಂತಾರೆ ಅವರ ‘ಡಿಜಾಂಗೋ ಕೃಷ್ಣಮೂರ್ತಿ’ ಹಾಗೂ ಶ್ರೀನಿವಾಸ್‌ರಾಜು ನಿರ್ದೇಶನದ ‘ಬೃಂದಾವಿಹಾರಿ’ ಮತ್ತು ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ ‘ತಮ್ಮ ಸುಖಾಗಮನ ಬಯಸುವವರು’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಪೈಕಿ ಎರಡು ಅಥವಾ ಮೂರು ಚಿತ್ರಗಳು ಇದೇ ವರ್ಷ ತೆರೆಗೆ ಬರಲಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net