ನಟ ದಿಗಂತ್ ಕಳೆದ ಒಂದು ವರ್ಷದಿಂದ ಯಾವ ಸಿನಿಮಾ ಕಾರ್ಯಕ್ರಮದಲ್ಲೂ ಭಾಗಿಯಾಗಿರಲಿಲ್ಲ. 2024ರಲ್ಲಿ "ಪೌಡರ್', "ಲಾಫಿಂಗ್ ಬುದ್ಧ', "ಮಾರಿಗೋಲ್ಡ್', "ದ ಜಡ್ಜ್ಮೆಂಟ್', "ಬ್ಯಾಚುಲರ್ ಪಾರ್ಟಿ' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಅವರು, ಕಳೆದ ವರ್ಷ "ಎಡಗೈಯೇ ಅಪಘಾತಕ್ಕೆ ಕಾರಣ'ದಲ್ಲಿ ನಟಿಸಿದ್ದರು. ಆದರೆ, "ಎಡಗೈಯೇ...' ಎರಡು ವರ್ಷ ತಡವಾಗಿ ಬಿಡುಗಡೆಯಾದ ಸಿನಿಮಾ ಆಗಿತ್ತು. ಆ ಬಳಿಕ ಅವರು ಸಿಕ್ಕಿದ್ದು ಬರೋಬ್ಬರಿ 18 ತಿಂಗಳ ನಂತರ, ಇತ್ತೀಚೆಗಷ್ಟೆ "ರುದ್ರ ಕಾಲ' ಮುಹೂರ್ತದಲ್ಲಿ. ದಿಗಂತ್, "ಎರಡು ಸಿನಿಮಾ ಸೈನ್ ಮಾಡಿದ್ದೆ. ಆದರೆ, ಸ್ವಲ್ಪ ಸಿನಿಮಾ ಮಾರ್ಕೆಟ್ ಕರೆಕ್ಷನ್ ಆಗುತ್ತಿದೆ ನಂತರ ಮಾಡೋಣ ಅಂತ ನಿರ್ಮಾಪಕರು ಚಿತ್ರೀಕರಣವನ್ನೇ ಪ್ರಾರಂಭಿಸಲಿಲ್ಲ. ಹೀಗಾಗಿ ಬೇರೆ ಕರಿಯರ್ ಹುಡುಕಿಕೊಳ್ಳಬೇಕಾ? ಹೊಸ ಕೆಲಸ ಪ್ರಾರಂಭಿಸಬೇಕಾ? ಅಂತೆಲ್ಲ ಯೋಚನೆ ಬರಲಾರಂಭಿಸಿತು. ಮುಂದೇನು ಅಂತ ಕಾಡಲು ಆರಂಭಿಸಿತು. ತೀರ್ಥಹಳ್ಳಿಗೆ ಹೋಗಿ ತೋಟ ನೋಡಿಕೊಳ್ಳಲಾ ಅಂತಲೂ ಅನ್ನಿಸಿದ್ದುಂಟು. ಹೈಡ್ರೋಫೋನಿಕ್ ಕೃಷಿ ಕೋರ್ಸ್ ಮಾಡಿ, ಅದನ್ನು ಪ್ರಾರಂಭಿಸೋಣ ಅಂತಲೂ ಯೋಚಿಸಿದ್ದೆ. ನಾನೊಬ್ಬನೇ ಅಲ್ಲ ಚಿತ್ರರಂಗದ ಹಲವು ಗೆಳೆಯರದೂ ಇದೇ ಪರಿಸ್ಥಿತಿಯಾಗಿದೆ. 20 ವರ್ಷಗಳಲ್ಲಿ ಇದೇ ಮೊದಲ ಬಾರಿ ನನಗೆ ಹೀಗನ್ನಿಸಿದ್ದು. ಪ್ರತಿ ವರ್ಷ ಮೂರ್ನಾಲ್ಕು ಸಿನಿಮಾ ಮಾಡುತ್ತಿದ್ದೆ. ಸಿನಿಮಾ ಹಿಟ್ ಆಗಲಿ, ಆಗದಿರಲಿ ನಾನು ಬಿಜಿಯಿದ್ದೆ. ಹಾಗಾಗಿ ನನಗೆ ಯಾವತ್ತೂ ಅಂತಹ ಯೋಚನೆ ಬಂದಿರಲಿಲ್ಲ. ಇನ್ನೊಮ್ಮೆ ಮುಂಬೈಗೆ ಹೋಗಿಬಿಡೋಣ ಅಂತಲೂ ಅನ್ನಿಸಿತ್ತು. ಅದರ ನಡುವೆ ತೆಲುಗಿನಲ್ಲಿ ಒಂದು ಅವಕಾಶ ಬಂತು. ಅಲ್ಲಿ ನೋಡಿದರೆ ಯಾವ ಸ್ಟುಡಿಯೋಗಳೂ ಖಾಲಿ ಇಲ್ಲ. ಎಲ್ಲ ಕಡೆ ಶೂಟಿಂಗ್ಗಳು ನಡೆಯುತ್ತಿವೆ. ಆದರೆ, ಕನ್ನಡ ಚಿತ್ರರಂಗದಲ್ಲಿ ಹೊಸ ಸಿನಿಮಾಗಳು ಸೆಟ್ಟೇರುತ್ತಿಲ್ಲ. ಬೇರಾವ ಚಿತ್ರರಂಗದಲ್ಲೂ ಇಲ್ಲದ ಸಮಸ್ಯೆಗಳು ಕನ್ನಡ ಚಿತ್ರರಂಗವನ್ನು ಕಾಡುತ್ತಿವೆ. ನಂದಿ ಬೆಟ್ಟದ ಸಮೀಪ ಖರೀದಿಸಿದ್ದ ಮನೆಯನ್ನು ಏರ್ಬಿಎನ್ಬಿ ಮೂಲಕ ಬಾಡಿಗೆ ಕೊಟ್ಟಿದ್ದೇನೆ, ಚಿತ್ರರಂಗದ ಹೊರತಾಗಿಯೂ ಬೇರೆ ಆದಾಯದ ಮೂಲಗಳನ್ನು ಸೃಷ್ಟಿಸಿಕೊಳ್ಳುವ ಪ್ರಯತ್ನದಲ್ಲಿದ್ದೇನೆ. ಮಹಿಳಾ ಪ್ರಧಾನ ಕಥೆಗಳಲ್ಲಿ ನಟಿಸಬೇಕು ಅಂತ ಐಂದ್ರಿತಾ ಆಸೆ. ಅವರು ಸಹ ಅಂತಹ ಕಥೆಗಳಿಗೆ ಎದುರು ನೋಡುತ್ತಿದ್ದಾರೆ' ಎಂದು ಮಾಹಿತಿ ನೀಡುತ್ತಾರೆ.