ಕಾನೂನಿನ ಮೂಲಕ ತಮ್ಮ ಪರಮಾಪ್ತ ಧನ್ವೀರ್ ಬಾಯಿಗೆ ಬೀಗಲು ಜಡಿಯಲು ದರ್ಶನ್​ ನಿರ್ಧಾರ! Actor Darshan

Actor Darshan
ನಟ ದರ್ಶನ್​ ಹಾಗೂ ನಟ ಧನ್ವೀರ್​ ಗೌಡ
Published on: 

ಬೆಂಗಳೂರು: ನಟ ದರ್ಶನ್ ತೂಗುದೀಪ ( Actor Darshan ) ಕುಟುಂಬ ಹಾಗೂ ನಟ ಧನ್ವೀರ್ ಗೌಡ ನಡುವೆ ಇದ್ದ ಆಪ್ತ ಸ್ನೇಹ ಸಂಬಂಧ ಸಂಪೂರ್ಣವಾಗಿ ಹಳಿ ತಪ್ಪಿದ್ದು, ತೀವ್ರ ಬಿರುಕು ಮೂಡಿದೆ. ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಹಾಗೂ ಅವರ ಆಪ್ತ ವಲಯವನ್ನು ಗುರಿಯಾಗಿಸಿಕೊಂಡು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವ ಧನ್ವೀರ್ ಗೌಡಗೆ ಕಾನೂನಿನ ಮೂಲಕವೇ ಕಡಿವಾಣ ಹಾಕಲು ನಟ ದರ್ಶನ್ ಮುಂದಾಗಿದ್ದು, ನ್ಯಾಯಾಲಯದಿಂದ ಪ್ರತಿಬಂಧಕಾಜ್ಞೆ (Injunction Order) ತರಲು ಗಂಭೀರ ನಿರ್ಧಾರ ಕೈಗೊಂಡಿದ್ದಾರೆ.

ನಟ ದರ್ಶನ್ ಅವರನ್ನೇ ತಮ್ಮ ಮಾರ್ಗದರ್ಶಿ ಎಂದು ಸ್ವೀಕರಿಸಿದ್ದ ನಟ ಧನ್ವೀರ್ ಗೌಡ ಮತ್ತು ದರ್ಶನ್ ಕುಟುಂಬದ ನಡುವೆ ಇದ್ದ ಬಾಂಧವ್ಯ ಹಳಸಲು ಹಣಕಾಸಿನ ವ್ಯವಹಾರವೇ ಮುಖ್ಯ ಕಾರಣ ಎನ್ನಲಾಗಿದೆ. ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ಧನ್ವೀರ್ ನಡುವೆ ಕಳೆದ ಕೆಲವು ಸಮಯದಿಂದ ಆರ್ಥಿಕ ವಿಚಾರಕ್ಕೆ ಸಂಬಂಧಿಸಿದಂತೆ ಮುಸುಕಿನ ಗುದ್ದಾಟ ನಡೆಯುತ್ತಿತ್ತು.

Also Read
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಫೋಟಕ ತಿರುವು: ದರ್ಶನ್​, ಪವಿತ್ರ ಗೌಡ ಶೆಡ್​ ಬಳಿ ಬಂದಿರಲಿಲ್ಲ ಎಂದ ಪ್ರತ್ಯಕ್ಷ ಸಾಕ್ಷಿ! Actor Darshan
Actor Darshan

ಈ ಹಣಕಾಸಿನ ವ್ಯಾಜ್ಯವು ತಾರಕಕ್ಕೇರಿದ ಪರಿಣಾಮ, ಧನ್ವೀರ್ ಗೌಡ, ವಿಜಯಲಕ್ಷ್ಮೀ, ದಿನಕರ್ ತೂಗುದೀಪ ಸೇರಿದಂತೆ ದರ್ಶನ್ ಅವರ ಆಪ್ತರನ್ನು ಗುರಿಯಾಗಿಸಿಕೊಂಡು ಬಹಿರಂಗವಾಗಿ ವಾಗ್ದಾಳಿ ನಡೆಸಲು ಪ್ರಾರಂಭಿಸಿದ್ದರು. ಇದಕ್ಕೆ ಸಂಬಂಧಿಸಿದ ಸಾಕಷ್ಟು ಆಡಿಯೋಗಳು ಈಗಾಗಲೇ ವೈರಲ್​ ಆಗಿವೆ.

ದರ್ಶನ್ ಅವರ ಬೆಂಬಲದಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಧನ್ವೀರ್, ಇದೀಗ ಅವರ ಕುಟುಂಬದ ತೇಜೋವಧೆಗೆ ಇಳಿದಿರುವುದು ಅಭಿಮಾನಿಗಳು ಹಾಗೂ ಆಪ್ತರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಈ ನಿಂದನೆಗಳು ಮತ್ತು ಆಧಾರರಹಿತ ಹೇಳಿಕೆಗಳು ಮಿತಿಮೀರಿದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ನಟ ದರ್ಶನ್ ತಮ್ಮ ಕುಟುಂಬದ ರಕ್ಷಣೆಗೆ ಮುಂದಾಗಿದ್ದಾರೆ.

ತಮ್ಮ ಕುಟುಂಬದ ಘನತೆ ಹಾಗೂ ಸುಖಾಸುಮ್ಮನೆ ಹರಡುತ್ತಿರುವ ಆರೋಪಗಳಿಗೆ ಪೂರ್ಣವಿರಾಮ ಇಡಲು ಕಾನೂನು ಸಮರಕ್ಕಿಳಿಯಲು ದರ್ಶನ್ ತೀರ್ಮಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಧನ್ವೀರ್ ಗೌಡ ಅವರು ಇನ್ಮುಂದೆ ನಟ ದರ್ಶನ್, ಅವರ ಪತ್ನಿ ವಿಜಯಲಕ್ಷ್ಮೀ, ಸಹೋದರ ದಿನಕರ್ ತೂಗುದೀಪ ಅಥವಾ ಅವರ ಕುಟುಂಬದ ಯಾವುದೇ ವಿಷಯಗಳಿಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಾಗಲಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಾಗಲಿ ಯಾವುದೇ ರೀತಿಯ ಹೇಳಿಕೆ ನೀಡದಂತೆ ತಡೆಯಲು ಕೋರ್ಟ್ ಮೂಲಕ ಪ್ರತಿಬಂಧಕಾಜ್ಞೆ ಪಡೆದುಕೊಳ್ಳಲು ದರ್ಶನ್ ಪಕ್ಕಾ ಪ್ಲಾನ್ ಮಾಡಿದ್ದು, ಶೀಘ್ರದಲ್ಲೇ ಧನ್ವೀರ್‌ಗೆ ಕಾನೂನಿನ ಬಾಯಿಗೆ ಬೀಗ ಜಡಿಯಲು ಸಿದ್ಧತೆ ನಡೆಸಿದ್ದಾರೆ.