ಈ ಸಲ ಕಪ್ ನಮ್ದೇ: ಆರ್‌ಸಿಬಿ ಪರ ಬ್ಯಾಟ್ ಬೀಸಿದ ಸ್ಯಾಂಡಲ್‌ವುಡ್ ತಾರೆಯರು

rachitha
Published on

ಐಪಿಎಲ್-18ರ ಆವೃತ್ತಿಯ ಫೈನಲ್ಸ್‌ಗೆ ಕ್ಷಣಗಣನೆ ಆರಂಭವಾಗಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ಅಂತಿಮ ಪಂದ್ಯ ನಡೆಯಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಈ ಹಿನ್ನೆಲೆಯಲ್ಲಿ ರಜತ್ ಪಾಟೀದಾರ್ ನಾಯಕತ್ವದ ಆರ್‌ಸಿಬಿ ತಂಡದ ಗೆಲುವಿಗೆ ಅಭಿಮಾನಿಗಳು ಈಗಾಗಲೇ ಪ್ರಾರ್ಥನೆ ಆರಂಭಿಸಿದ್ದಾರೆ. ಹಾಗೆಯೇ ಸ್ಯಾಂಡಲ್‌ವುಡ್ ತಾರೆಯರಾದ ನಿರ್ದೇಶಕ ಸಿಂಪಲ್ ಸುನಿ, ನಟಿಯರಾದ ರಚಿತಾ ರಾಮ್, ಮೌನ ಗುಡ್ಡೆಮನೆ, ಸ್ವಪ್ನಾ ಶೆಟ್ಟಿಗಾರ್ ಸೇರಿ ಹಲವರು ಶುಭ ಹಾರೈಸಿದ್ದಾರೆ.

ಫೈನಲ್ಸ್ ಮ್ಯಾಚ್​ ನೋಡಲಿದ್ದೇನೆ

ಇಂದಿನ ಆರ್‌ಸಿಬಿ ಫೈನಲ್ ಮ್ಯಾಚ್ ವೀಕ್ಷಣೆಗೆ ನಾನು ಅಹಮದಾಬಾದ್‌ಗೆ ತೆರಳುತ್ತಿದ್ದೇನೆ. ಈ ಬಾರಿ ನಮ್ಮ ತಂಡ ಎಲ್ಲ ವಿಭಾಗಗಳಲ್ಲಿ ಅತ್ಯುತ್ತಮವಾಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಉತ್ತಮ ಲಯದಲ್ಲಿದೆ. ಹಾಗಾಗಿ, ಈ ಬಾರಿ ನಾವು ಕಪ್ ನಿರೀಕ್ಷಿಸಬಹುದು. ಪಂಜಾಬ್ ಕೂಡ ಉತ್ತಮ ತಂಡ. ಆದರೆ, ಸದ್ಯ ಆ ಟೀಮ್‌ನಲ್ಲಿರುವ ಬಹುತೇಕರು ನಮ್ಮ ಮಾಜಿ ಆರ್‌ಸಿಬಿ ಆಟಗಾರರರೇ. ನನಗೆ ವಿರಾಟ್ ಕೊಹ್ಲಿ ಫೇವರಿಟ್. ಈ ಆವೃತ್ತಿಯಲ್ಲಿ ಅವರು ಅತ್ಯುತ್ತಮ ಕೊಡುಗೆ ನೀಡಿದ್ದಾರೆ. ಹೀಗಾಗಿ, ಟೀಮ್ ಫೈನಲ್‌ಗೆ ಬರಲು ಕಾರಣವಾಯಿತು. ಆರ್‌ಸಿಬಿ ಅಭಿಮಾನಿಗಳು ‘ಈ ಸಲ ಕಪ್ ನಮ್ದೇ’ ಘೋಷಣೆ ಮೂಲಕ ಕನ್ನಡವನ್ನು ಜಗತ್ತಿಗೆ ಪಸರಿಸುವಂತೆ ಮಾಡಿದ್ದಾರೆ. ಇದು ಅಭಿಮಾನಿಗಳ ತಂಡ. ಕಪ್ ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ.

| ಸಿಂಪಲ್ ಸುನಿ, ನಿರ್ದೇಶಕ

18 ಫೇವರಿಟ್!

ನಮ್ಮ ಟೀಂ ಆರ್‌ಸಿಬಿ. ಈ ಸಲ ಕಪ್ ನಮ್ದೇ. ಐಪಿಎಲ್ ಆರಂಭವಾಗಿ 18 ವರ್ಷಗಳಾಗಿವೆ. ಜತೆಗೆ ವಿರಾಟ್ ಕೊಹ್ಲಿಯ ಜರ್ಸಿ ನಂಬರ್ ಕೂಡ 18. ಹೀಗಾಗಿ, ಹದಿನೆಂಟು ನಂಬರ್ ಜತೆ ನಮಗೆ ವಿಶೇಷವಾದ ನಂಟಿದೆ. ಇನ್ನು ಎಲ್ಲ ರೀತಿಯಿಂದಲೂ ನೋಡಿದಾಗ ಆರ್‌ಸಿಬಿ ಟೀಮ್ ಬಲಿಷ್ಠವಾಗಿದೆ. ಈ ಸಲ ಕಪ್ ನಮ್ಮದೇ ಎಂಬ ನಂಬಿಕೆ ಅಭಿಮಾನಿಗಳಲ್ಲಿ ಬಲವಾಗಿದೆ.

| ರಚಿತಾ ರಾಮ್, ನಟಿ

ಪ್ರತಿ ಪಂದ್ಯ ವೀಕ್ಷಿಸಿದ್ದೇನೆ

ಆರ್‌ಸಿಬಿ ನನ್ನ ನೆಚ್ಚಿನ ತಂಡ. ಈ ಆವೃತ್ತಿಯಲ್ಲಿ ಬೆಂಗಳೂರಿನಲ್ಲಿ ನಡೆದ ಎಲ್ಲ ಪಂದ್ಯಗಳನ್ನು ನಾನು ಮೈದಾನದಲ್ಲೇ ನೋಡಿದ್ದೇನೆ. ಇದೀಗ ನಮ್ಮ ತಂಡ ಫೈನಲ್‌ನಲ್ಲಿದೆ ಎಂಬುದು ದೊಡ್ಡ ಸಂತೋಷದ ವಿಷಯ. ನಮ್ಮ ತಂಡ ಗೆಲುವು ಸಾಧಿಸುತ್ತದೆ. ಈ ಬಾರಿ ಬ್ಯಾಟಿಂಗ್, ಬೌಲಿಂಗ್ ಎಲ್ಲವೂ ಚೆನ್ನಾಗಿದೆ. ವಿರಾಟ್ ಕೊಹ್ಲಿ ತಂಡಕ್ಕೆ ಆಧಾರಸ್ತಂಭವಾಗಿದ್ದಾರೆ. ಈಗಾಗಲೇ ಅವರು ಅತಿಹೆಚ್ಚು ರನ್ ಬಾರಿಸಿದ್ದಾರೆ. ಇಂದು ನಮ್ಮದೇ ಗೆಲುವು, ಈ ಸಲ ಕಪ್ ನಮ್ದೇ.

| ಅದ್ವಿತಿ ಶೆಟ್ಟಿ, ನಟಿ

ವಿರಾಟ್ ಹೋಪ್

ನಮ್ಮ ತಂಡಕ್ಕೆ 18 ವರ್ಷಗಳಿಂದ ವಿರಾಟ್ ಕೊಹ್ಲಿ ಭರವಸೆಯಾಗಿದ್ದಾರೆ. ಈ ಬಾರಿ ರಜತ್ ಪಾಟೀದಾರ್ ಕೂಡ ಚೆನ್ನಾಗಿ ಟೀಮ್ ಮುನ್ನಡೆಸಿದ್ದಾರೆ. ಇಲ್ಲಿಯವರಿಗೂ ಎಲ್ಲರೂ ಚೆನ್ನಾಗಿ ಆಟ ಆಡಿದ್ದಾರೆ. ಮುಖ್ಯವಾಗಿ ಚೆನ್ನೈ, ಮುಂಬೈ ತಂಡಗಳನ್ನು ಮಣಿಸಿದ್ದಾರೆ. ಈಗಾಗಲೇ ಪಂಜಾಬ್ ತಂಡವನ್ನು ಒಂದು ಬಾರಿ ಸೋಲಿಸಿದ್ದು, ಫೈನಲ್‌ನಲ್ಲಿ ಕೂಡ ಸೋಲಿಸಲಿದ್ದಾರೆ ಎಂಬ ಭರವಸೆಯಿದೆ. ಈ ಬಾರಿ ಕಪ್ ನಮ್ಮದೇ ಆಗಲಿದೆ ಎಂಬ ಭರವಸೆ, ನಿರೀಕ್ಷೆ ಎರಡೂ ಇದೆ.

ಮೌನ ಗುಡ್ಡೆಮನೆ, ನಟಿ

ಆರ್‌ಸಿಬಿ ಅಂದ್ರೆ ಜೋಶ್

ಈ ಬಾರಿ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಒಳ್ಳೆಯ ತಂಡ ಕಟ್ಟಿದೆ. ಕಳೆದ ಮ್ಯಾಚ್‌ನಲ್ಲಿ ಜಿತೇಶ್ ಬ್ಯಾಟಿಂಗ್ ನಿಜಕ್ಕೂ ರೋಮಾಂಚನೀಯ. ಈ ಬಾರಿ ಕನ್ನಡಿಗ ಮಯಾಂಕ್ ಅಗರ್ವಾಲ್ ಮಿಂಚುತ್ತಿದ್ದಾರೆ. ಇದೊಂದು ಕನ್ನಡಿಗರಿಗೆ ಖುಷಿಯ ಸಂಗತಿ. ಇಂದು ಮನೆಯಲ್ಲಿಯೇ ಕುಟುಂಬದೊಂದಿಗೆ ಮ್ಯಾಚ್ ನೋಡಿ ಸಂಭ್ರಮಿಸುವೆ. ನನ್ನ ಪ್ರಕಾರ, ಟಾಸ್ ಗೆದ್ದರೆ ಚೇಸಿಂಗ್ ಮಾಡುವುದು ಉತ್ತಮ. ಎದುರಾಳಿ ತಂಡವನ್ನು ಸರಿಯಾಗಿ ಅರಿಯಬಹುದು. ಅವರು ನೀಡಿದ ಟಾರ್ಗೆಟ್ ನಮ್ಮ ಗಮನದಲ್ಲಿರುತ್ತದೆ. ಹಾಗಾಗಿ, ನೋಡಿಕೊಂಡು ಆಟವಾಡಬಹುದು. ಈ ಬಾರಿ ನನಗೆ ವಿರಾಟ್ ಕೊಹ್ಲಿ ಸೇರಿ ಹೇಜಲ್‌ವುಡ್, ಕೃನಾಲ್, ಸುಹಾಸ್ ಶರ್ಮಾ ಎಲ್ಲರೂ ಇಷ್ಟವಾದರು. ಪ್ರತಿಯೊಬ್ಬರ ಶ್ರಮಕ್ಕೆ ಇಂದು ಬೆಲೆ ಸಿಗಲಿದೆ. ಕಪ್ ನಮ್ಮದಾಗಲಿದೆ.

ಸ್ವಪ್ನಾ ಶೆಟ್ಟಿಗಾರ್, ನಟಿ

ಬ್ರಾಟ್ ‘ಹಾಡಿನ’ ಉಡುಗೊರೆ

ನಟ ಡಾರ್ಲಿಂಗ್ ಕೃಷ್ಣ ಹಾಗೂ ನಟಿ ಮನೀಶಾ ಕಂದ್ಕೂರು ಮುಖ್ಯಭೂಮಿಕೆಯಲ್ಲಿರುವ ‘ಬ್ರಾಟ್’ ಚಿತ್ರತಂಡ ಆರ್‌ಸಿಬಿಗಾಗಿ ವಿಶೇಷ ಹಾಡನ್ನು ಬಿಡುಗಡೆ ಮಾಡಿದೆ. ಈ ಹಾಡು, ‘ಆರ್ ಸಿಬಿ ಅಂದ್ರೆ ಬರೀ ಒಂದು ಟೀಮ್ ಅಲ್ಲ. ಅದು ಕೋಟ್ಯಂತರ ಅಭಿಮಾನಿಗಳಿರುವ ಅರ್ಮಿ ಅಂದ್ರೆ ಪರವಾಗಿಲ್ಲ’ ಎಂಬ ಗೀತೆಯಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಮನೀಶಾ ಹೆಜ್ಜೆ ಹಾಕಿದ್ದು, ಜಾಲತಾಣದಲ್ಲಿ ವೈರಲ್ ಆಗಿದೆ.

ವಿರಾಟ್-ಅಯ್ಯರ್ ಸಾಧನೆ ಕೊಂಡಾಡಿದ ರಾಜಮೌಳಿ

ಇಂದಿನ ಫೈನಲ್ ಪಂದ್ಯದ ಮೇಲೆ ನಿರ್ದೇಶಕ ಎಸ್.ಎಸ್.ರಾಜಮೌಳಿ ಕುತೂಹಲದಲ್ಲಿದ್ದು, ಆರ್‌ಸಿಬಿ ಮತ್ತು ಪಂಜಾಬ್ ಎರಡೂ ತಂಡಗಳಿಗೆ ಶುಭ ಹಾರೈಸಿದ್ದಾರೆ. ಜತೆಗೆ ಶ್ರೇಯಸ್ ಅಯ್ಯರ್ ಹಾಗೂ ವಿರಾಟ್ ಕೊಹ್ಲಿಯ ಸಾಧನೆಯನ್ನು ಕೊಂಡಾಡಿದ್ದಾರೆ. ‘ಬುಮ್ರಾ, ಬೌಲ್ಟ್ ಯಾರ್ಕರ್‌ಗಳನ್ನು ಥರ್ಡ್‌ಮ್ಯಾನ್ ಮೂಲಕ ಬೌಂಡರಿ ಹೇಗೆ ಬಾರಿಸಬೇಕು ಎನ್ನುವುದನ್ನು ಅಯ್ಯರ್ ನೋಡಿ ಕಲಿಯಬೇಕು. ಅಸಾಮಾನ್ಯ ಶ್ರೇಯಸ್ ಅಯ್ಯರ್ ಈ ಹಿಂದೆ ‘ಡೆಲ್ಲಿ’ ತಂಡವನ್ನು ೈನಲ್‌ಗೆ ತಂದಿದ್ದರು. ಆದರೆ, ಆ ತಂಡ ಇವರನ್ನು ಕೈಬಿಟ್ಟಿತ್ತು. ಬಳಿಕ ಕೊಲ್ಕತ್ತಾ ತಂಡದ ನೇತೃತ್ವ ವಹಿಸಿಕೊಂಡು ಕಪ್ ಗೆಲ್ಲಿಸಿಕೊಟ್ಟರು. ಬಳಿಕ ಟೀಮ್‌ನಿಂದ ಹೊರಗುಳಿಬೇಕಾಯಿತು. ಇದೀಗ ಪಂಜಾಬ್ ತಂಡದ ನಾಯಕತ್ವ ವಹಿಸಿಕೊಂಡು 11 ವರ್ಷಗಳ ಬಳಿಕ ಫೈನಲ್‌ಗೆ ಬರುವಂತೆ ಮಾಡಿದ್ದಾರೆ. ಈ ಪ್ರಶಸ್ತಿ ಪಡೆಯಲು ಶ್ರೇಯಸ್ ಅರ್ಹರು. ಇನ್ನೊಂದು ಬದಿಯಲ್ಲಿ ವಿರಾಟ್ ಕೊಹ್ಲಿ ಇದ್ದಾರೆ. ಹಲವು ವರ್ಷಗಳಿಂದ ಆರ್‌ಸಿಬಿಗಾಗಿ ಸಾವಿರಾರು ರನ್ ಗಳಿಸಿದ್ದಾರೆ. ಇದೀಗ ಫೈನಲ್ ಹಂತದಲ್ಲಿದ್ದಾರೆ. ಕೊನೆಯಲ್ಲಿ ಲಿತಾಂಶ ಏನೇ ಆಗಿರಲಿ. ಈ ಇಬ್ಬರಲ್ಲಿ ಒಬ್ಬರ ಕಾರಣಕ್ಕಾಗಿ ನಾವು ನಿರಾಸೆ ಅನುಭವಿಸಬೇಕಾಗುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net