

ಬೆಂಗಳೂರು: ಟಿಕ್ಟಾಕ್ಗೆ ಇತೀಶ್ರೀ ಹಾಡುವ ಕಾಲ ಸಮೀಪಿಸುವ ಹಾಗೆ ಕಾಣುತ್ತಿದೆ. ಎಲ್ಲೆಡೆ ಬ್ಯಾನ್ಗೆ ಕರೆ ನೀಡುತ್ತಿದ್ದಾರೆ. ಅದರಲ್ಲೂ ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಸ್ವದೇಸಿ ಉತ್ಪನ್ನಗಳ ಬಳಕೆಗೆ ಹೆಚ್ಚು ಒತ್ತು ನೀಡಿ, ಅದನ್ನೇ ಬಳಕೆ ಮಾಡುವಂತೆ ದೇಶದ ಜನತೆಗೆ ಕರೆ ನೀಡಿದ್ದರು. ಇದೀಗ ಆ ಒಂದು ಮಾತಿಗೆ ದೇಶವ್ಯಾಪಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿದೇಶಿ ವಸ್ತುಗಳ ಬಳಕೆಯನ್ನು ನಿಷೇಧ ಮಾಡಿ ದೇಸಿ ಉತ್ಪನ್ನಗಳತ್ತ ಜನ ಮನಸು ಮಾಡಿದ್ದಾರೆ. ಅದರಲ್ಲೂ ಈ ಒಂದು ನೀತಿಯಿಂದ ಚೀನಾ ಮೂಲದ ಟಿಕ್ಟಾಕ್ ಕಂಪನಿಗೂ ದೊಡ್ಡ ಹೊಡೆತ ಬಿದ್ದಿದೆ! ಅದ್ಯಾವ ಮಟ್ಟಿಗೆ ಅಂದರೆ, ಸ್ಯಾಂಡಲ್ವುಡ್ ನಿರ್ದೇಶಕರೂ ಈಗ ಟಿಕ್ ಟಾಕ್ ಬ್ಯಾನ್ ಬಗ್ಗೆ ಅಭಿಯಾನವನ್ನೇ ಶುರುಮಾಡಿದ್ದಾರೆ.
ಹೌದು, ನಿರ್ದೇಶಕರಾದ ಎ.ಪಿ ಅರ್ಜುನ್, ಸಂತೋಷ್ ಆನಂದ್ ರಾಮ್, ಪವನ್ ಒಡೆಯರ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬ್ಯಾನ್ ಟಿಕ್ಟಾಕ್ ಜೈಹಿಂದ್ ಎಂದು ಬರೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಬಾಲಿವುಡ್ನ ಹಿರಿಯ ನಟ ಪರೇಶ್ ರಾವಲ್ ಬ್ಯಾನ್ ಟಿಕ್ಟಾಕ್ ಎಂದು ಟ್ವಿಟ್ ಮಾಡಿದ್ದರು. ಅವರ ಆ ಟ್ವಿಟ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಬ್ಯಾನ್ಗೆ ನಿರ್ಧರಿಸಿದ್ದಾರೆ. ಒಂದಷ್ಟು ಮಂದಿ ಆ್ಯಪ್ ಅನ್ಇನ್ಸ್ಟಾಲ್ ಮಾಡಿದ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಇದೀಗ ಅದೇ ಟ್ರೆಂಡ್ ಕನ್ನಡದಲ್ಲೂ ಶುರುವಾಗಿದ್ದು, ಸ್ಯಾಂಡಲ್ವುಡ್ ನಿರ್ದೇಶಕರ ಈ ಕಾರ್ಯಕ್ಕೆ ಅವರ ಅಭಿಮಾನಿಗಳು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮತ್ತಷ್ಟು ಸಿನಿಮಾ ತಾರೆಯರು ಈ ಕೆಲಸಕ್ಕೆ ಧುಮುಕಬೇಕೆಂದು ಒತ್ತಾಯಿಸುತ್ತಿದ್ದಾರೆ.