ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ
ಇಲ್ಲಿನ ನದಿ ಒಡಲಿನಲ್ಲಿ ಮಣ್ಣು ಮಿಶ್ರಿತ ಮರಳು ದಿಬ್ಬಗಳು ಮೂಡುತ್ತಿದ್ದು, ಆತಂಕಕ್ಕೆ ಕಾರಣವಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಈ ದಿಬ್ಬಗಳು ವಿಸ್ತಾರಗೊಳ್ಳುತ್ತಿದ್ದು, ಮಳೆಗಾಲದಲ್ಲಿ ಶ್ರೀ ನದಿ ನೀರು ಉಕ್ಕಿ ನೆರೆ ಭೀತಿಯನ್ನು ಸೃಷ್ಟಿಸಿದೆ.
ಕಳೆದೆರಡು ವರ್ಷಗಳಿಂದ ಬಿಳಿಯೂರು ಅಣೆಕಟ್ಟಿನ ಹಿನ್ನೀರು ನಿಲುಗಡೆಯಾಗುತ್ತಿರುವ ನೇತ್ರಾವತಿ ನದಿಯ ಭಾಗದಲ್ಲೆಲ್ಲಾ ನದಿ ಒಡಲಿನಲ್ಲಿ ಈ ರೀತಿಯ ಮರಳು ಮಣ್ಣು ಮಿಶ್ರಿತ ದಿಬ್ಬಗಳು ಮೂಡುತ್ತಿವೆ. ಅಣೆಕಟ್ಟಿಗೆ ಗೇಟು ಅಳವಡಿಸಿದ ಬಳಿಕ ಸುರಿಯುವ ಮಳೆಯಿಂದಾಗಿ ಹರಿದು ಬರುವ ನೀರಿನಲ್ಲಿರುವ ಮಣ್ಣು ನಿಂತ ನೀರಿನಲ್ಲಿ ತಳ ಸೇರಿ ಈ ರೀತಿಯ ದಿಬ್ಬಗಳ ರಚನೆಗೆ ಕಾರಣವಾಗುತ್ತಿದೆ. ಉಪ್ಪಿನಂಗಡಿಯ ಸಂಗಮ ಸ್ಥಳದಿಂದ ನೇತ್ರಾವತಿ ಸೇತುವೆವರೆಗೆ ನದಿ ಒಡಲಿನಲ್ಲಿ ಸುಮಾರು ಹತ್ತರಿಂದ ಹದಿನೈದು ಅಡಿ ವಿಸ್ತಾರದಲ್ಲಿ ಇಂತಹ ದಿಬ್ಬಗಳು ನಿರ್ಮಾಣವಾಗಿದ್ದು, ಈ ದಿಬ್ಬಗಳ ರಚನೆಗೆ ನದಿ ಬದಿಯಲ್ಲಿ ಬೆಳೆದುನಿಂತ ಕುರುಚಲು ಗಿಡಗಳು ಸಹಕಾರಿಯಾಗಿದೆ.
ಕೇವಲ ಎರಡೇ ವರ್ಷದ ಹಿನ್ನೀರು ನಿಲುಗಡೆಯಿಂದ ಈ ಮಟ್ಟದಲ್ಲಿ ದಿಬ್ಬಗಳ ರಚನೆಯಾದರೆ, ಮುಂದಿನ ಕೆಲ ವರ್ಷಗಳಲ್ಲಿ ಇದು ಮತ್ತಷ್ಟು ವಿಸ್ತಾರಗೊಂಡು ಮಳೆಗಾಲದಲ್ಲಿ ನೀರಿನ ಹರಿಯುವಿಕೆಗೆ ತಳ ಭಾಗದಲ್ಲಿ ಸ್ಥಳಾವಕಾಶದ ಕೊರತೆ ಸೃಷ್ಟಿಯಾಗಿ ನದಿಯ ನೀರು ಉಕ್ಕಿ ಹರಿಯುವಂತಾಗಲು ಕಾರಣವಾದೀತೆಂಬ ಭೀತಿಯ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ತೆರವು ಪ್ರಕ್ರಿಯೆ ಅನಿವಾರ್ಯ
ನದಿಯಲ್ಲಿ ಇದೀಗ ವರ್ಷದ ಬಹುತೇಕ ಎಲ್ಲ ದಿನಗಳಲ್ಲಿಯೂ ನೀರು ನಿಲುಗಡೆಯಾಗುತ್ತಿರುವುದರಿಂದ ಮರಳುಗಾರಿಕೆಗೂ ತಡೆಯಾಗಿದೆ. ನದಿಯ ಒಡಲು ಸಹಜ ಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಲು ಮಳೆಗಾಲದ ಮುನ್ನ ನದಿ ಒಡಲಿನಲ್ಲಿ ಮೂಡಿರುವ ಮಣ್ಣು ಮಿಶ್ರಿತ ಮರಳ ದಿಬ್ಬವನ್ನು ತೆರವುಗೊಳಿಸುವ ಅನಿವಾರ್ಯತೆ ಉಂಟಾಗಿದೆ.
ಕಳೆದ ವರ್ಷ ನದಿಯಲ್ಲಿ ಹಿನ್ನೀರು ತುಂಬಿದಾಗ ಉಪ್ಪಿನಂಗಡಿಯ ದೇಗುಲದ ಬಳಿಯ ಮೆಟ್ಟಿಲುಗಳು ನೀರಿನಿಂದ ಮುಳುಗಡೆಯಾಗಿದ್ದರೆ, ಈ ಬಾರಿ ಮೆಟ್ಟಿಲ ಬಳಿಯೆಲ್ಲಾ ಮಣ್ಣಿನ ದಿಬ್ಬವೇ ಕಾಣಿಸಿತ್ತು. ಮಾತ್ರವಲ್ಲದೆ ನದಿಯುದ್ದಕ್ಕೂ ಇದೇ ರೀತಿಯ ಮರಳು ಮಿಶ್ರಿತ ಮಣ್ಣಿನ ದಿಬ್ಬಗಳು ಬಲವಾಗಿ ಬೆಳೆದಿದ್ದು, ಇದು ಈ ಬಾರಿಯ ಮಳೆಗಾಲದಲ್ಲಿ ನೀರಿನ ರಭಸದ ಹರಿಯುವಿಕೆಗೆ ಸಿಲುಕಿ ಕೊಚ್ಚಿ ಹೋಗದೇ ಇದ್ದರೆ ನದಿಯ ಒಡಲೇ ಮೇಲೇರಿದಂತಾಗಿ ನದಿ ನೀರು ಉಕ್ಕಿ ಹರಿಯಲು ಕಾರಣವಾದೀತು.
ಸುಧಾಕರ ಶೆಟ್ಟಿ ಸಾಮಾಜಿಕ ಕಾರ್ಯಕರ್ತ
ನದಿಯ ಒಡಲಿನಲ್ಲಿ ನದಿ ದಂಡೆಯ ಸಮೀಪ ಮರಳು ಮಿಶ್ರಿತ ಮಣ್ಣಿನ ದಿಬ್ಬ ಇರುವುದರಿಂದ ನದಿ ದಡದಲ್ಲಿನ ಮಣ್ಣಿನ ಸವಕಳಿ ತಡೆಯಲು ಸಾಧ್ಯ. ಆದರೆ ಇದರಿಂದಾಗಿ ಭಾರಿ ಮಳೆಯಾಗುವ ಸಮಯದಲ್ಲಿ ನೀರಿನ ಹರಿಯುವಿಕೆಗೆ ಸ್ಥಳಾವಕಾಶ ಸಾಕಾಗದೆ ಅನಗತ್ಯ ನೆರೆ ಭೀತಿ ಉದ್ಭವಿಸುವ ಸಾಧ್ಯತೆ ಕಂಡು ಬಂದಿರುವುದರಿಂದ ಈ ಸಮಸ್ಯೆಯ ನಿವಾರಣೆಗೆ ಆಡಳಿತ ವ್ಯವಸ್ಥೆ ಗಮನಹರಿಸಿದರೆ ಉತ್ತಮ.
ಮಹೇಶ್ ಬಜತ್ತೂರು ಸಾಮಾಜಿಕ ಕಾರ್ಯಕರ್ತ
ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳ ಅರ್ಜಿ ಆಹ್ವಾನ
ಕರ್ತವ್ಯಕ್ಕೆ ಅಡ್ಡಿ ಮಾಜಿ ಶಾಸಕ ಮೊಯ್ದೀನ್ ಬಾವ ವಿರುದ್ಧ ಪ್ರಕರಣ ದಾಖಲು