

ಬೆಂಗಳೂರು: ಬೈಕ್ ಅಪಘಾತದ ಬಳಿಕ ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಚಿಂತೆಗೀಡಾಗಿದ್ದ ಸಂಚಾರಿ ವಿಜಯ್ ಕುಟುಂಬಕ್ಕೆ ನಟ ಕಿಚ್ಚ ಸುದೀಪ್ ನೆರವಾಗಿದ್ದಾರೆಂಬ ಮಾಹಿತಿ ತಿಳಿದುಬಂದಿದೆ.
ಸ್ನೇಹಿತ ನವೀನ್ ಜತೆ ಬರುವಾಗ ಬೈಕ್ ಸ್ಕಿಡ್ ಆಗಿ ಸಂಭವಿಸಿದ ಅಪಘಾತದಲ್ಲಿ ವಿಜಯ್ ಹಾಗೂ ನವೀನ್ಗೆ ಗಂಭೀರ ಗಾಯಗಳಾಗಿವೆ. ಬನ್ನೇರುಘಟ್ಟ ರಸ್ತೆ ಬಳಿ ಜೆ.ಪಿ ನಗರದ 7th ಬ್ಲಾಕ್ ನಲ್ಲಿ ನಿನ್ನೆ ರಾತ್ರಿ (ಜೂನ್ 12) ಅವಘಡ ಸಂಭವಿಸಿದೆ. ಬೈಕ್ ಓಡಿಸುತ್ತಿದ್ದ ನವೀನ್ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹಿಂಬದಿ ಕುಳಿತಿದ್ದ ಸಂಚಾರಿ ವಿಜಯ್ಗೆ ತೀವ್ರ ಗಾಯಗಳಾಗಿವೆ.
ಘಟನೆಯ ಬೆನ್ನಲ್ಲೇ ಅವರನ್ನು ಅಪೋಲೋ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆರಂಭದಲ್ಲಿ ಆಸ್ಪತ್ರೆಯ ಆಡಳಿತ ವರ್ಗ ಬೆಡ್ ಇಲ್ಲ ಎಂದು ಹೇಳಿತ್ತು. ಈ ವೇಳೆ ಚಿಂತಿಗೀಡಾಗಿದ್ದ ಕುಟುಂಬಕ್ಕೆ ಕಿಚ್ಚ ಸುದೀಪ್ ನೆರವಾದರು. ತಡರಾತ್ರಿಯೇ ಆಸ್ಪತ್ರೆಯ ಸಿಇಓ ಜತೆ ಮಾತನಾಡಿದ ಸುದೀಪ್, ತಕ್ಷಣ ಚಿಕಿತ್ಸೆ ಕೊಡುವಂತೆ ಮನವಿ ಮಾಡಿದರು. ಬಳಿಕ ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.
ಸಹೋದರನಿಗಾಗಿ ಪ್ರಾರ್ಥಿಸಿ
ಸಂಚಾರಿ ವಿಜಯ್ ಅಪಘಾತದ ಸುದ್ದಿ ಕೇಳಿ ಆಘಾತಕ್ಕೆ ಒಳಗಾಗಿರುವ ಅವರ ಸಹೋದರ ಸಿದ್ದೇಶ್ ಕುಮಾರ್, ವಿಜಯ್ ನಮ್ಮ ಕುಟುಂಬದ ಆಧಾರಸ್ತಂಭ. ಆತ ಸುಮ್ಮನೆ ಕೂರುವ ವ್ಯಕ್ತಿ ಅಲ್ಲ. ಲಾಕ್ಡೌನ್ ಸಮಯದಲ್ಲಿ ಸಾಕಷ್ಟು ಸಮಾಜಮುಖಿ ಕೆಲಸ ಮಾಡುತ್ತಿದ್ದ. ನಿನ್ನೆಯೂ ಅಂತದ್ದೇ ಕೆಲಸ ಮುಗಿಸಿ ಬರುವಾಗ ಅವಘಡ ಸಂಭವಿಸಿದೆ. ವೈದ್ಯರು 48ಗಂಟೆ ನಿಗಾದಲ್ಲಿ ಇರಿಸಿದ್ದಾರೆ. ನಾಳೆಗೆ 48 ಗಂಟೆ ಪೂರ್ಣಗೊಳ್ಳಲಿದೆ. ದಯವಿಟ್ಟು ನನ್ನ ಸಹೋದರನಿಗಾಗಿ ಪ್ರಾರ್ಥಿಸಿ ಎಂದು ವಿಜಯ್ ಸಹೋದರ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.