ಈ ಮೂವರು ಇಲ್ಲದಿರುವುದೇ ಟೀಮ್ ಇಂಡಿಯಾಗೆ ದೊಡ್ಡ ಲಾಸ್​! ನಾವಂತು ಇದರ ಲಾಭ ಪಡಿತೀವಿ: ಜಯಸೂರ್ಯ

ವಿಜಯವಾಣಿ - 2024-07-25T093923.976
Published on

ನವದೆಹಲಿ: ಮುಂಬರುವ ಶ್ರೀಲಂಕಾ ಮತ್ತು ಟೀಮ್ ಇಂಡಿಯಾ ವಿರುದ್ಧದ ಟಿ20ಐ ಸರಣಿಗೆ ಈಗಾಗಲೇ ತಂಡದ ಆಟಗಾರರ ಪಟ್ಟಿ ಪ್ರಕಟವಾಗಿದ್ದು, ಎರಡು ಟೀಮ್​​ಗಳು ಸದ್ಯ ಭರ್ಜರಿ ತಯಾರಿಯಲ್ಲಿ ತೊಡಗಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಸದ್ಯ ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಟೀಮ್ ಇಂಡಿಯಾ ಎದುರುನೋಡುತ್ತಿದ್ದರೆ, ಅತ್ತ ಶ್ರೀಲಂಕಾದ ಮಾಜಿ ನಾಯಕ ಹಾಗೂ ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ತಂಡದ ಹಂಗಾಮಿ ಕೋಚ್ ಆಗಿರುವ ಮಾಜಿ ಹಿರಿಯ ಕ್ರಿಕೆಟಿಗ ಸನತ್ ಜಯಸೂರ್ಯ ತಮ್ಮ ತಂಡ ಮೂರು ಪಂದ್ಯಗಳ ಟಿ20 ಸರಣಿ ಆಡುವ ಮುನ್ನವೇ ಏನ್ನನ್ನೋ ಸಾಧಿಸಿದೆ ಎಂಬ ಖುಷಿಯಲ್ಲಿ ತೇಲಾಡುತ್ತಿರುವಂತೆ ಭಾಸವಾಗುತ್ತಿದೆ. ಭಾರತ ವಿರುದ್ಧದ ಪಂದ್ಯಗಳಿಗೂ ಮೊದಲು ಸಂದರ್ಶನವೊಂದರಲ್ಲಿ ಮಾತನಾಡಿರುವ ಸನತ್​, ಭಾರತದ ತಂಡದ ನ್ಯೂನತೆಗಳೇ ತಮ್ಮ ತಂಡದ ಗೆಲುವಿಗೆ ಕಾರಣವಾಗಲಿದೆ ಎಂದು ಹೇಳಿದ್ದಾರೆ.

"ಆರ್​ಆರ್​ ಪರ ಓಪನರ್​ ಆಗಿ ಕಣಕ್ಕಿಳಿಯುವ ಯಶಸ್ವಿ ಜೈಸ್ವಾಲ್ ಅವರ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ರಾಜಸ್ಥಾನ ರಾಯಲ್ಸ್ ಉನ್ನತ ಕಾರ್ಯಕ್ಷಮತೆಯ ನಿರ್ದೇಶಕರಾದ ಜುಬಿನ್ ಭರುಚಾ ಅವರೇ ಇದೀಗ ಶ್ರೀಲಂಕಾ ಆಟಗಾರರಿಗೆ ಆರು ದಿನಗಳ ವರ್ಕ್​​ಶಾಪ್​ ನಡೆಸಿದ್ದಾರೆ.

ನಮ್ಮ ಹುಡುಗರಿಗೆ ಗೆಲುವಿನ ಮಂತ್ರ ಹಾಗೂ ಹೊಸ ತಂತ್ರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅವರ ಮಾತುಗಳು ಶ್ರೀಲಂಕಾ ಆಟಗಾರರ ಮೇಲೆ ಉತ್ತಮ ಪ್ರಭಾವ ಬೀರಲಿದೆ" ಎಂದು ಭರವಸೆ ವ್ಯಕ್ತಪಡಿಸಿದ ಜಯಸೂರ್ಯ, "ಸ್ಟಾರ್​ ಕ್ರಿಕೆಟಿಗರಾದ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಇಲ್ಲಿದಿರುವುದೇ ಟೀಮ್ ಇಂಡಿಯಾಗೆ ದೊಡ್ಡ ಹೊಡೆತ" ಎಂದು ಲೇವಡಿ ಮಾಡಿದ್ದಾರೆ.

“ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅತ್ಯುತ್ತಮ ಆಟಗಾರರು. ತಮ್ಮ ದೇಶಕ್ಕಾಗಿ ಅನೇಕ ಪಂದ್ಯಗಳನ್ನು ಇವರಿಬ್ಬರು ಗೆದ್ದಿದ್ದಾರೆ ಮತ್ತು ಅವರ ಪ್ರಾಮುಖ್ಯತೆ ಎಷ್ಟಿದೆ ಎಂಬುದು ನಮಗೆ ತಿಳಿದಿದೆ. ಜಡೇಜಾ ಕೂಡ ದೊಡ್ಡ ಸ್ಟಾರ್​ ಆಟಗಾರ. ಅವರ ಅನುಪಸ್ಥಿತಿಯು ಭಾರತ ತಂಡಕ್ಕೆ ದೊಡ್ಡ ನಷ್ಟ ಎಂದೇ ಹೇಳಬಹುದು. ಖಂಡಿತ ನಾವು ಇದರ ಲಾಭವನ್ನು ಪಡೆಯುತ್ತೇವೆ" ಎಂದು ಜಯಸೂರ್ಯ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net