

ವಿಜಯವಾಣಿ ಸುದ್ದಿಜಾಲ ಉಡುಪಿ
ನ್ಯಾಯಾಂಗ ಕ್ಷೇತ್ರದಲ್ಲಿ ನ್ಯಾಯದಾನ ಅತ್ಯಂತ ಮಹತ್ವದ್ದಾಗಿದ್ದು, ಯಾವುದೇ ಪ್ರಕರಣಕ್ಕೆ ಸಂಬಂಧಿಸಿ ನಿರ್ಧಾರ, ತೀರ್ಪು ನೀಡಲು ಒಂದು ನೆಲೆ (ಬೇಸ್) ಬೇಕಾಗುತ್ತದೆ. ಅದುವೇ ಭಗವದ್ಗೀತೆ. ಗೀತೆಯ ಆಧಾರದಲ್ಲಿ ತೀರ್ಪು, ನ್ಯಾಯದಾನವಾದರೆ ಅದು ಯಶಸ್ಕರವಾಗಿಯೂ ಶ್ರೇಷ್ಠವೂ ಆಗಿರುತ್ತದೆ. ಭಗವದ್ಗೀತೆ ಜಡ್ಜ್ಮೆಂಟ್ ಗ್ರಂಥವಾಗಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಅಭಿಮತ ವ್ಯಕ್ತಪಡಿಸಿದರು.
ಮನ:ಶಾಸ್ತ್ರೀಯ, ಕಲೆ-ಸಾಹಿತ್ಯ ಹೀಗೆ ಬೇರೆ ಬೇರೆ ದೃಷ್ಟಿಯಲ್ಲಿ ಭಗವದ್ಗೀತೆಯನ್ನು ನೋಡಲಾಗಿದೆ. ಅವುಗಳಲ್ಲಿ ನ್ಯಾಯದೃಷ್ಟಿ ಎಲ್ಲಕ್ಕಿಂತ ಪ್ರಮುಖ ಸಂಗತಿಯಾಗಿದೆ. ವಾದ ಎಷ್ಟೇ ಮಾಡಬಹುದು. ಆದರೆ, ತೀರ್ಪು ನೀಡುವುದು ಅತ್ಯಂತ ಕ್ಲಿಷ್ಟಕರ. ಜೀವನ ಎಂದರೆ ತೀರ್ಪುಗಳ ಸರಮಾಲೆ. ಸತ್ಯ ಅಂದರೆ ಏನು? ಒಳ್ಳೆಯವರು- ಕೆಟ್ಟವರು ಯಾರು ಎಂದು ತೀರ್ಮಾನಿಸುವುದು ಕಷ್ಟ. ಅಂತಿಮವಾಗಿ ಆತ್ಮಸಾಕ್ಷಿಯು ಯಾವುದನ್ನು ಹೇಳುತ್ತದೆಯೋ ಅದುವೇ ಸತ್ಯ. ಆತ್ಮಸಾಕ್ಷಿಯೊಳಗೆ ಭಗವಂತ ಇರುತ್ತಾನೆ. ಆತನೇ ಆತ್ಮಸಾಕ್ಷಿಗೆ ಪ್ರೇರಣೆ ನೀಡುತ್ತಾನೆ. ಹೀಗಾಗಿ ಆತ್ಮಸಾಕ್ಷಿಯನ್ನು ಸದಾ ಜಾಗೃತವಾಗಿಟ್ಟುಕೊಳ್ಳಬೇಕು ಎಂದು ಮಧ್ವಾಚಾರ್ಯರೇ ತಿಳಿಸಿದ್ದಾರೆ. ನ್ಯಾಯಾಧೀಶರಿಗೆ ದೇವರ ಬಗ್ಗೆ, ಸಂಸ್ಕೃತಿ ಹಾಗೂ ಧರ್ಮದ ಬಗ್ಗೆ ಪರಿಜ್ಞಾನ ಇದ್ದರೆ ನ್ಯಾಯದಾನ ಮಾಡಲು ಸುಲಭವಾಗುತ್ತದೆ. ಅದಕ್ಕೆ ಗೀತೆಯೇ ಆಧಾರವಾಗಿದೆ ಎಂದರು.
ಪ್ರಾಶ್ನಿಕರಾಗಿ ಪಾಲ್ಗೊಂಡಿದ್ದ ಸುವರ್ಣ ವಾಹಿನಿಯ ಔಟ್ಪುಟ್ ಎಡಿಟರ್ ಶೋಭಾ ಮಳವಳ್ಳಿ ಅವರು ನ್ಯಾಯಾಂಗ ವ್ಯವಸ್ಥೆಯಲ್ಲಿ, ಸಾರ್ವಜನಿಕ ನ್ಯಾಯದ ವಿಚಾರದಲ್ಲಿ ಭಗವದ್ಗೀತೆ ಹೇಗೆ ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷವಾಗಿ ಬೆಸೆದಿದೆ ಎಂಬ ಕುರಿತು ವಿವಿಧ ಪ್ರಶ್ನೆಗಳನ್ನು ನ್ಯಾಯಾಧೀಶರಿಗೆ ಕೇಳಿದರು.
ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು. ಸುಗುಣಮಾಲಾ ಪತ್ರಿಕೆಯ ಸಂಪಾದಕ ಮಹಿತೋಷ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ದಿವಾನ ನಾಗರಾಜ್ ಆಚಾರ್ಯ, ಮಠದ ವಿದೇಶ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಉಪಸ್ಥಿತರಿದ್ದರು. ರತೀಶ್ ತಂತ್ರಿ, ಮಠದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್ ಭಟ್ ಸಹಕರಿಸಿದರು.
ವಿವಿಧ ಕೋನ, ಕ್ಷೇತ್ರಗಳಲ್ಲಿ ಭಗವದ್ಗೀತೆಯ ಪ್ರಸ್ತುತತೆ ಗಮನಿಸಲೆಂದೇ ಬೃಹತ್ ಗೀತೋತ್ಸವ ನಡೆಸಲಾಗುತ್ತಿದೆ. ಅತ್ಯಂತ ಕ್ಲಿಷ್ಟಕರ ಸ್ಥಿತಿಯಲ್ಲಿರುವ ಇಂದಿನ ಭಾರತಕ್ಕೆ ನಮ್ಮ ನ್ಯಾಯಾಂಗ ವ್ಯವಸ್ಥೆ ಆಶಾಕಿರಣವಾಗಿದೆ. ಉಳಿದೆಲ್ಲ ಕ್ಷೇತ್ರ ಕಲುಷಿತಗೊಂಡಿದೆ. ರಾಜಕೀಯ ಕ್ಷೇತ್ರವಂತೂ ಹೊಲಸುಗೆಟ್ಟಿದೆ. ನ್ಯಾಯಾಂಗ ವ್ಯವಸ್ಥೆ ಸುಸ್ಥಿಯಲ್ಲಿದ್ದರೆ ಮಾತ್ರ ದೇಶ ಭದ್ರವಾಗಿರುತ್ತದೆ. | ಸುಗುಣೇಂದ್ರ ತೀರ್ಥ ಶ್ರೀಪಾದರು. ಪುತ್ತಿಗೆ ಮಠ ಯುಕ್ತ ಕಾನೂನು ಪ್ರಕ್ರಿಯೆ ಮೂಲಕ ಸಾಕ್ಷ್ಯಗಳಿಗೆ ಪ್ರಮಾಣ ಮಾಡುವ ಪದ್ಧತಿ ಇದೆಯೇ ಹೊರತು ಭಗವದ್ಗೀತೆ ಮುಟ್ಟಿ ಪ್ರಮಾಣ ಮಾಡುವ ಪದ್ಧತಿ ಕೋರ್ಟ್ಗಳಲ್ಲಿ ಇರಲಿಲ್ಲ. ಅದನ್ನು ಸಿನಿಮಾ ಕ್ಷೇತ್ರದವರು ತಪ್ಪಾಗಿ ಬಿಂಬಿಸುತ್ತಿದ್ದಾರೆ. ಕಟಕಟೆಯಲ್ಲಿ ಎಲ್ಲ ಧರ್ಮೀಯರೂ ಬರುವುದರಿಂದ ಒಂದು ಧರ್ಮಗ್ರಂಥ ಮುಟ್ಟಿಸಿ ಪ್ರಮಾಣ ಮಾಡುವುದು ಸರಿಯಲ್ಲ. ಅದರಿಂದ ಆ ಧರ್ಮಗ್ರಂಥದ ಮೌಲ್ಯವೂ ನಶಿಸುತ್ತದೆ. | ವಿ.ಶ್ರೀಶಾನಂದ. ಹೈಕೋರ್ಟ್ ನ್ಯಾಯಮೂರ್ತಿ