ಬೆಂಗಳೂರು: ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದ್ದ ಆಸ್ತಿಗೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ್ದ ದಂಪತಿ ಮತ್ತು ಸಬ್ ರಿಜಿಸ್ಟ್ರಾರ್ಗಳು ಸೇರಿ ಏಳು ಮಂದಿಯ ವಿರುದ್ಧ ಕೆ.ಆರ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಾರಿ ನಿರ್ದೇಶನಾಲಯ (ಇಡಿ) ಸಹಾಯಕ ನಿರ್ದೇಶಕ ರಿತೇಶ್ಕುಮಾರ್ ಕೊಟ್ಟ ದೂರಿನ ಆಧಾರದ ಮೇಲೆ ವಂಚನೆ ಮಾಡಿದ ಜಾನ್ ಮೈಕಲ್, ಮಂಜುಳಾ ಮೈಕಲ್ ದಂಪತಿ, ಕೆ.ಆರ್.ಪುರ ಸಬ್ ರಿಜಿಸ್ಟ್ರಾರ್ಗಳಾದ ಸಿ.ವಿ. ಸುಮನ, ಕೃಷ್ಣ ಎಸ್. ನಾಯಕ್ ಮತ್ತು ಆಸ್ತಿ ಖರೀದಿಸಿದ ಲಕ್ಷ್ಮೀ ಉಮಾಪತಿ, ಬಸಂತಿ ವಿರುದ್ಧ ಎಫ್ಐಆರ್ ದಾಖಲಿಸಿ ಕೆ.ಆರ್.ಪುರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬಿಡಿಎ ಲೇಔಟ್ನಲ್ಲಿ ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿರುವ ಸಿಎ ಸೈಟ್ಗಳನ್ನು ಮಂಜೂರು ಮಾಡಿಸಿ ಕೊಡುವುದಾಗಿ ಹೇಳಿ ಪ್ರತ್ಯೇಕವಾಗಿ ಇಬ್ಬರ ಕಡೆಯಿಂದ ಜಾನ್ ಮೈಕಲ್ ದಂಪತಿ 1.45 ಕೋಟಿ ರೂ. ವಂಚನೆ ಮಾಡಿದ್ದರು. ಇದೇ ಹಣದಲ್ಲಿ ಕಾರು ಮತ್ತು ಭೂಮಿ ಖರೀದಿ ಮಾಡಿದ್ದರು. ಹಣ ಕಳೆದುಕೊಂಡವರು ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದರು. ಇದೇ ವೇಳೆ ಅಕ್ರಮ ಹಣಕಾಸು ವಹಿವಾಟು ಆರೋಪದ ಮೇಲೆ ಇಡಿ ಅಧಿಕಾರಿಗಳು, 2011ರಲ್ಲಿ ಕೇಸ್ ದಾಖಲು ಮಾಡಿಕೊಂಡು ಜಾನ್ ಮೈಕಲ್ ದಂಪತಿಗೆ ಸೇರಿದ ಬಿದರಹಳ್ಳಿ ಹೋಬಳಿ ಜಿಂಕೆ ತಿಮ್ಮನಹಳ್ಳಿ ಗ್ರಾಮದಲ್ಲಿನ ಸೈಟ್ಗಳನ್ನು ಜಪ್ತಿ ಮಾಡಿದ್ದರು. ಜತೆಗೆ ಕೆ.ಆರ್.ಪುರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಇಡಿ ಜಪ್ತಿ ಮಾಡಿರುವ ಕುರಿತು ತಡೆಯಾಜ್ಞೆ ನೀಡಿದ್ದರು.
2018ರಲ್ಲಿ ಜಾನ್ ಮೈಕಲ್ ದಂಪತಿ, ಇಡಿ ನ್ಯಾಯಾಲಯ ಸೈಟ್ಗಳ ಮಾರಾಟಕ್ಕೆ ನೀಡಿದ್ದ ತಡೆಯಾಜ್ಞೆ ತೆರವು ಮಾಡಿದೆ ಎಂಬ ನಕಲಿ ಆದೇಶ ಪ್ರತಿ ಸೃಷ್ಟಿ ಮಾಡಿದ್ದರು. ಈ ನಕಲಿ ಆದೇಶ ಪ್ರತಿಯನ್ನು ಕೆ.ಆರ್.ಪುರ ಸಬ್ ರಿಜಿಸ್ಟ್ರಾರ್ ಕಚೇರಿಗೆ (ಅಂದಿನ ಉಪ ನೋಂದಣಾಧಿಕಾರಿ ಕೃಷ್ಣ ಎಸ್. ನಾಯಕ್) ನೀಡಿ ಇಡಿ ನೀಡಿದ್ದ ತಡೆಯಾಜ್ಞೆಯನ್ನು ಸರ್ಕಾರಿ ದಾಖಲೆಯಿಂದ ತೆಗೆಸಿದ್ದರು. ಆಬಳಿಕ 2020ರಲ್ಲಿ ಜಾನ್ ಮೈಕಲ್ ದಂಪತಿ, ಇಡಿ ಜಪ್ತಿ ಮಾಡಿದ್ದ ಸ್ವತ್ತನ್ನು ಲಕ್ಷ್ಮೀ ಉಮಾಪತಿ ಮತ್ತು ಬಸಂತಿ ಎಂಬುವರಿಗೆ 55.41 ಲಕ್ಷ ರೂ.ಗೆ ಮಾರಾಟ ಮಾಡಿದ್ದಾರೆ. ಈ ಕ್ರಯ ಪತ್ರವನ್ನು ಕೆ.ಆರ್.ಪುರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ (ಉಪ ನೋಂದಣಾಧಿಕಾರಿ ಸಿ.ವಿ. ಸುಮನ) ನಡೆದಿದೆ. ಮೈಕಲ್ ದಂಪತಿ ವಂಚನೆಗೆ ಸಬ್ ರಿಜಿಸ್ಟ್ರಾರ್ಗಳು ಮತ್ತು ಖರೀದಿದಾರರು ಒಳಸಂಚು ರೂಪಿಸಿ ಜಪ್ತಿ ಮಾಡಿರುವ ಆಸ್ತಿಯನ್ನು ಮಾರಾಟ ಮಾಡಲಾಗಿದೆ ಎಂದು ದೂರು ನೀಡಿದ್ದಾರೆ. ಇದರ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಜಾಮೀನು ಅರ್ಜಿ ವಜಾ: ಕೆ.ಆರ್.ಪುರ ಠಾಣೆಯಲ್ಲಿ ಎಫ್ಐಆರ್ ಆಗಿರುವ ವಿಷಯ ತಿಳಿದು ಸಬ್ ರಿಜಿಸ್ಟ್ರಾರ್ಗಳಾದ ಕೃಷ್ಣ ನಾಯಕ್ ಮತ್ತು ಸುಮನ, ನಿರೀಕ್ಷಣಾ ಜಾಮೀನು ಕೋರಿ 55ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ ನ್ಯಾಯಾಲಯದ ಮೋರೆ ಹೋಗಿದ್ದರು. ಜಾಮೀನು ನಿರಾಕರಿಸಿ ನ್ಯಾಯಾಲಯ ಅರ್ಜಿ ವಜಾ ಮಾಡಿದೆ.
ಕಾರು ಚಲಾಯಿಸುತ್ತಿರುವಾಗಲೇ ಹೃದಯಾಘಾತ; ಹೊಲಕ್ಕೆ ನುಗ್ಗಿದ ವಾಹನ, 29 ವರ್ಷದ ಇಂಜಿನಿಯರ್ ಸಾವು..