

ಮುಂಬೈ: ದೇಶದಲ್ಲಿ ಕರೊನಾದಿಂದಾಗಿ ತೀವ್ರ ಸಂಕಷ್ಟಕ್ಕೀಡಾಗಿರುವ ಮಹಾರಾಷ್ಟ್ರ ತನ್ನ ಉದ್ಯೋಗಿಗಳ ಸಂಬಳದಲ್ಲಿ ಭಾರಿ ಕಡಿತ ಘೋಷಿಸಿದೆ.
ಮಂಗಳವಾರ (ಮಾರ್ಚ್ 31) ಡಿಸಿಎಂ ಅಜಿತ್ ಪವಾರ್ ಸರ್ಕಾರದ ನಿರ್ಧಾರವನ್ನು ಪ್ರಕಟಿಸಿದರು. 2019-20 ನೇ ಸಾಲಿನ ಆದಾಯದಲ್ಲಿ ತೀವ್ರ ಕುಸಿತ ಉಂಟಾಗಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಆರ್ಥಿಕ ಸಂಕಷ್ಟವನ್ನು ಕೊಂಚಮಟ್ಟಿಗೆ ಸರಿದೂಗಿಸಲು ಈ ಕ್ರಮಕ್ಕೆ ಮುಂದಾಗಲಾಗಿದೆ. ಮಾರ್ಚ್ ತಿಂಗಳಿನಿಂದಲೇ ಅನ್ವಯವಾಗುವಂತೆ ಸಂಬಳ ಕಡಿತ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.
ಸಿಎಂ, ಡಿಸಿಎಂ, ಸಚಿವರು, ಶಾಸಕರು ಸೇರಿ ಗ್ರಾಮಪಂಚಾಯತ್ ವರೆಗಿನ ಎಲ್ಲ ಜನಪ್ರತಿನಿಧಿಗಳ ಸಂಬಳದಲ್ಲಿ ಶೇ.60 ಕಡಿತ ಮಾಡಲಾಗಿದೆ. ಇವರಿಗೆ ಇನ್ನುಳಿದ ಶೇ.40 ಸಂಬಳವನ್ನು ಮಾತ್ರ ನೀಡಲಾಗುತ್ತದೆ. ಇನ್ನು, ಗ್ರುಪ್ ಎ ಮತ್ತು ಬಿ ಹುದ್ದೆಗಳ ಅಧಿಕಾರಿಗಳ ವೇತನದಲ್ಲಿ ಅರ್ಧದಷ್ಟುಮಾತ್ರ ಬಟವಾಡೆ ಮಾಡಲಾಗುವುದು. ಕಾರ್ಯದರ್ಶಿಗಳಿಂದ ಹಿಡಿದು ಸಹಾಯಕ ದರ್ಜೆ ಅಧಿಕಾರಿಗಳು ಇದರಲ್ಲಿ ಸೇರಿದ್ದಾರೆ. ಗ್ರೂಪ್ ಸಿ ಅಂದರೆ ಗುಮಾಸ್ತ ಸಿಬ್ಬಂದಿಗೆ ಶೇ.75 ಸಂಬಳ ನೀಡಲಾಗುವುದು.
ಗ್ರೂಪ್ ಡಿ ನೌಕರರಿಗೆ ಪೂರ್ಣ ಸಂಬಳ: ಸರ್ಕಾರಿ ಉದ್ಯೋಗಿಗಳಲ್ಲಿ ಕೊನೆಯ ಹಂತದಲ್ಲಿರುವ ಗ್ರೂಪ್ ಡಿ ನೌಕರರ ಸಂಬಳದಲ್ಲಿ ಯಾವುದೇ ಕಡಿತ ಇರುವುದಿಲ್ಲ. ಅಂದರೆ. ಜವಾನರು, ಕಚೇರಿ ಸಹಾಯಕರ ವೇತನವನ್ನು ಪೂರ್ಣವಾಘಿ ಪಾವತಿಸಲಾಗುವುದು ಎಂದು ಅಜಿತ್ ಪವಾರ್ ತಿಳಿಸಿದ್ದಾರೆ.
ಸರ್ಕಾರಿ ನೌಕರರ ವಿವಿಧ ಸಂಘಟನೆಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಈ ನಿರ್ಧಾರ ಪ್ರಕಟಿಸಲಾಗಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.
ಇದೇ ವೇಳೆ, ರಾಜ್ಯದ ವಿವಿಧ ರಾಜಕೀಯ ಪಕ್ಷಗಳು ತಮ್ಮ ಸದಸ್ಯರ ಒಂದು ತಿಂಗಳ ಸಂಬಳವನ್ನು ಸರ್ಕಾರದ ಪರಿಹಾರದ ನಿಧಿಗೆ ನೀಡುವುದಾಗಿ ಘೋಷಿಸಿವೆ.