

ಬೆಂಗಳೂರು: ಯಂಗ್ ರೆಬೆಲ್ ಸ್ಟಾರ್, ಡಾರ್ಲಿಂಗ್ ಪ್ರಭಾಸ್ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ ಬಹುನಿರೀಕ್ಷಿತ ಸಲಾರ್ ಚಿತ್ರ ಶುಕ್ರವಾರ (ಡಿಸೆಂಬರ್ 22) ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಚಿತ್ರಕ್ಕೆ ಪಾಸಿಟಿವ್ ರೆಸ್ಪಾನ್ಸ್ ದೊರೆತ್ತಿದ್ದು, ಬಾಕ್ಸ್ಆಫೀಸ್ ಗಳಿಕೆಯಲ್ಲಿ ಚಿತ್ರ ಹಿಂದೆ ಬಿದ್ದಂತೆ ಕಾಣುತ್ತಿಲ್ಲ.
ಪ್ರಭಾಸ್ ಕಮ್ಬ್ಯಾಕ್ ಸಿನಿಮಾ ಎಂದೇ ಹೇಳಲಾಗಿರುವ ಸಲಾರ್ ಚಿತ್ರ ಎರಡನೇ ದಿನ ಭಾರತದಲ್ಲಿ 55 ಕೋಟಿ ರೂಪಾಯಿ ಕಮಾಯಿ ಮಾಡಿದ್ದು, ಚಿತ್ರ ಎರಡು ದಿನದಲ್ಲಿ 145.70 ಕೋಟಿ ರೂಪಾಯಿ ಗಳಿಸಿದೆ. ಭಾನುವಾರ ಸಂಜೆ ವೇಳೆಗೆ 200 ಕೋಟಿ ರೂಪಾಯಿ ಗಳಿಕೆ ಮಾಡುವುದು ಪಕ್ಕಾ ಎಂದು ಬಾಕ್ಸ್ಆಫೀಸ್ ಪರಿಣಿತರು ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ: VIDEO| ಮಸೀದಿಯನ್ನು ಗುರಿಯಾಗಿಸಿಕೊಂಡು ಉಗ್ರರ ದಾಳಿ
ಸಲಾರ್ ಬಿಡುಗಡೆಯಾದ ಮೊದಲ ದಿನ ವಿಶ್ವದಾದ್ಯಂತ 178.7 ಕೋಟಿ ರೂಪಾಯಿ ಗಳಿಕೆ ಕಂಡಿದೆ. ಭಾರತದ ಬಾಕ್ಸ್ಆಫೀಸ್ನಲ್ಲಿ ಅಂದಾಜು 95 ಕೋಟಿ ರೂಪಾಯಿ ಕಮಾಯಿ ಮಾಡಿದೆ ಎಂದು ಹೇಳಲಾಗುತ್ತಿದೆ. ಡಂಕಿಗೆ ಹೋಲಿಸಿದರೆ, ಸಲಾರ್ ಮೊದಲ ದಿನದ ಕಲೆಕ್ಷನ್ನಲ್ಲಿ ಮುಂದಿದೆ. ದಕ್ಷಿಣ ಭಾರತದ ಸಿನಿಮಾವೊಂದು ಮತ್ತೊಮ್ಮೆ ಬಾಲಿವುಡ್ ಚಿತ್ರಕ್ಕೆ ಸೆಡ್ಡು ಹೊಡೆದು, ಬಾಕ್ಸ್ ಆಫೀಸಿನಲ್ಲಿ ಮುನ್ನುಗ್ಗುತ್ತಿರುವುದು ಎಲ್ಲರ ಹುಬ್ಬೇರಿಸಿದೆ.
ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್, ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್, ಗುಳ್ಟು ನವೀನ್ ಶಂಕರ್, ಪ್ರಮೋದ್, ಜಗಪತಿ ಬಾಬು ಮೊದಲಾದವರು ನಟಿಸಿದ್ದಾರೆ. ಕೆಜಿಎಫ್ 2 ಚಿತ್ರದಲ್ಲಿ ಕೆಲಸ ಮಾಡಿದ ಬಹುತೇಕ ತಂತ್ರಜ್ಞರು ಇಲ್ಲಿಯೂ ಕೆಲಸ ಮಾಡಿದ್ದಾರೆ. ಸಲಾರ್ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡಿದ್ದು, ಚಿತ್ರ ಡಿಸೆಂಬರ್ 22ರಂದು ವಿಶ್ವದಾದ್ಯಂತ ತೆರೆಕಂಡಿದೆ.