More

    ಹೂಡಿಕೆದಾರರಿಗೆ ಪಾಠ…; ಮ್ಯೂಚುವಲ್ ಫಂಡ್​ ಸಾಧಕ-ಬಾಧಕಗಳು

    ಹೂಡಿಕೆದಾರರಿಗೆ ಪಾಠ...; ಮ್ಯೂಚುವಲ್ ಫಂಡ್​ ಸಾಧಕ-ಬಾಧಕಗಳು‘ಮ್ಯೂಚುವಲ್ ಫಂಡ್​ಗಳು ಮಾರುಕಟ್ಟೆ ರಿಸ್ಕ್ (ಅಪಾಯ)ಗಳನ್ನು ಒಳಗೊಂಡಿರುತ್ತವೆ’ ಎಂಬ ನುಡಿಗಟ್ಟನ್ನು ನಾವೆಲ್ಲ ಕೇಳಿರುತ್ತೇವೆ. ಮ್ಯೂಚುವಲ್ ಫಂಡ್​ಗಳು ಮಾರುಕಟ್ಟೆ ಅಪಾಯಗಳಿಂದ, ಅಂದರೆ ನಷ್ಟದ ರಿಸ್ಕ್​ನಿಂದ ಹೊರತಾಗಿಲ್ಲ ಎಂಬುದನ್ನು ಹೂಡಿಕೆ ಮಾಡುವ ಜನರ ಮನಸ್ಸಿನಲ್ಲಿ ಬಿತ್ತಿ, ಅಚ್ಚೊತ್ತುವ ಹಾಗೆ ಈ ಪದಪುಂಜವನ್ನು ಜನಪ್ರಿಯಗೊಳಿಸಲಾಗಿದೆ.

    ಮ್ಯೂಚುವಲ್ ಫಂಡ್ ಉದ್ಯಮವು ಒಂದು ಸರಳ ನಂಬಿಕೆಯ ಆಧಾರದಲ್ಲಿ ನಡೆಯುತ್ತದೆ. ಷೇರು ಮಾರುಕಟ್ಟೆ (ಸ್ಟಾಕ್ ಮಾರ್ಕೆಟ್) ಕಾರ್ಯ ನಿರ್ವಹಣೆ ಬಗ್ಗೆ ನಮ್ಮಲ್ಲಿ ಬಹುತೇಕ ಮಂದಿಗೆ ಏನೂ ಗೊತ್ತಿಲ್ಲ ಎಂದೇ ಮ್ಯೂಚುವಲ್ ಫಂಡ್ ಕಂಪನಿಗಳವರು ನಮಗೆ ಹೇಳುತ್ತಾರೆ. ನಾವು ಹೂಡುವ ಹಣಕ್ಕೆ ಉತ್ತಮ ಲಾಭ ಬರುವ ಕುರಿತ ಸೂಕ್ತ ಮಾಹಿತಿ ಇಲ್ಲದಿರುವುದರಿಂದ ನಮಗೆ ಅನನುಕೂಲವೇ ಹೆಚ್ಚು ಎಂದು ಮನವರಿಕೆ ಮಾಡಲು ಅವರು ಪ್ರಯತ್ನಿಸುತ್ತಾರೆ. ಹಾಗಾಗಿ, ನಮ್ಮ ಪರವಾಗಿ ತಾವು ಹೂಡಿಕೆ ಮಾಡುವುದೇ ಉತ್ತಮ ಮಾರ್ಗ ಎಂದು ಅವರು ಹೇಳುತ್ತಾರೆ. ಅಂತೆಯೇ ಅವರು ನಿಮ್ಮ ಹಣವನ್ನು ಪಡೆದು, ನಿಮ್ಮಂತೆಯೇ ಇತರ ಜನರಿಂದ ಪಡೆದ ಹಣವನ್ನು ಸಂಗ್ರಹಿಸುತ್ತಾರೆ. ಅದನ್ನು ಗಣನೀಯವಾಗಿ ಉತ್ತಮ ಲಾಭ ಬರುವಂಥ ಆಯ್ದ ಷೇರುಗಳಲ್ಲಿ ಹೂಡುತ್ತಾರೆ. ಬಂದ ಲಾಭಕ್ಕೆ ಪ್ರತಿಯಾಗಿ ಅವರು ಒಂದು ಭಾಗವನ್ನು ಕಮಿಷನ್ ಪಡೆಯುತ್ತಾರೆ.

    ಪ್ರತಿಯೊಬ್ಬರಿಗೂ ಉತ್ತಮ ಲಾಭ ಬರುತ್ತದೆಂಬ ನಂಬಿಕೆಯನ್ನು ಮ್ಯೂಚುವಲ್ ಫಂಡ್ ಕಂಪನಿಗಳು ಹುಟ್ಟಿಸುತ್ತವೆ. ಆದರೆ ವಾಸ್ತವ ಪರಿಸ್ಥಿತಿ ಹಾಗಿಲ್ಲ. ಹಣ ಸಂಗ್ರಹಿಸುವ ಹಾಗೂ ಹೂಡುವ ಈ ಪ್ರಕ್ರಿಯೆಯಲ್ಲಿ ಸಹಜವಾಗಿಯೇ ಅಡಕವಾಗಿರುವ ಸಮಸ್ಯೆಗಳು ಇಲ್ಲಿಯೂ ಇರುತ್ತವೆ. ಒಂದು ನಿದರ್ಶನದ ಮೂಲಕ ಇದನ್ನು ವಿಶದಪಡಿಸುತ್ತೇನೆ. ಭಾರತದ ಅತಿ ದೊಡ್ಡ ಮ್ಯೂಚುವಲ್ ಫಂಡ್ ಸಂಸ್ಥೆಗಳಲ್ಲಿ ಒಂದಾದ ಫ್ರಾಂಕ್ಲಿನ್ ಟೆಂಪಲ್ಟನ್ 2020 ಏಪ್ರಿಲ್ 23ರಂದು ತನ್ನ ಆರು ಸಾಲ ಯೋಜನೆಗಳನ್ನು ಮುಚ್ಚುವ ಕುರಿತು ನೋಟಿಸ್ ಹೊರಡಿಸಿತು.

    ಇದನ್ನೂ ಓದಿ: ಲೋಕಲ್​ ಫೈಟ್​ ಎಫೆಕ್ಟ್​! ಮೂರೇ ದಿನದಲ್ಲಿ 10 ಸಾವಿರ ಕೋಳಿ ಮಾರಾಟ

    ಸಾಲ ಯೋಜನೆಗಳು: ಸಾಲ ಯೋಜನೆಗಳು ಇತರ ಮ್ಯೂಚುವಲ್ ಫಂಡ್​ಗಳಂತೆಯೇ ಇರುತ್ತವೆ. ಆದರೆ, ಮಾರುಕಟ್ಟೆ ಪರಿಸ್ಥಿತಿ ಆಧರಿಸಿ ಏರುಪೇರಾಗುವ ಈಕ್ವಿಟಿ ಷೇರುಗಳಲ್ಲಿ ಹೂಡುವ ಬದಲಿಗೆ ‘ಸಾಲ ಮ್ಯೂಚುವಲ್ ಫಂಡ್’ಗಳು (ಡೆಟ್ ಮ್ಯೂಚುವಲ್ ಫಂಡ್) ಕಾರ್ಪೆರೇಟ್ ಅಥವಾ ಸರ್ಕಾರಿ ಸಂಸ್ಥೆಗಳಿಗೆ ಸಾಲ ನೀಡುತ್ತವೆ. ಅದರಿಂದ ನಿಯತವಾಗಿ ಲಾಭ/ಆದಾಯ ಬರುವುದು ಖಚಿತವಾಗಿರುತ್ತದೆ. ಸಾಲ ಪಡೆದ ಕಂಪನಿಗಳು ಅಸಲನ್ನು ಮರುಪಾವತಿ ಮಾಡುವ ಹೊಣೆಗಾರಿಕೆ ಹೊಂದಿರುವುದರಿಂದ ಸ್ಥಿರವಾದ ಆದಾಯ ಬರುವುದು ನಿಶ್ಚಿತವಾಗಿರುತ್ತದೆ. ಅಂತೆಯೇ ಲಾಭದ ಪಾಲನ್ನೂ ಕೊಡಬೇಕಾಗುತ್ತದೆ. ಒಂದು ವೇಳೆ ಹಾಗೆ ಮಾಡದಿರುವ ಕಂಪನಿಗಳನ್ನು ಮ್ಯೂಚುವಲ್ ಫಂಡ್ ಕಂಪನಿಗಳು ದಿವಾಳಿ ಪ್ರಕ್ರಿಯೆಗೆ ಎಳೆಯಬಹುದಾಗಿದೆ. ಹೀಗಾಗಿ ಬಹುತೇಕ ಕಾರ್ಪೆರೇಟ್ ಕಂಪನಿಗಳು ಮಾತನ್ನು ಉಳಿಸಿಕೊಳ್ಳುತ್ತವೆ, ಹೊಣೆಗಾರಿಕೆ ನಿಭಾಯಿಸುತ್ತವೆ. ಆದ್ದರಿಂದ, ಸಾಲ ಯೋಜನೆಗಳನ್ನು ಮುಚ್ಚುವ (ಕ್ಲೋಸ್) ಫ್ರಾಂಕ್ಲಿನ್ ಟೆಂಪಲ್ಟನ್​ನ ದಿಢೀರ್ ನಿರ್ಧಾರ ಮಾರುಕಟ್ಟೆಯಲ್ಲಿ ಮಾತ್ರವಲ್ಲದೆ ಹೂಡಿಕೆದಾರರಲ್ಲೂ ಆಘಾತ ಮೂಡಿಸಿತ್ತು. ಮುಚ್ಚುವ ಪ್ರಸ್ತಾವನೆಯ ಆರು ಸಾಲ ಯೋಜನೆಗಳಲ್ಲಿ ಹೂಡಿಕೆದಾರರ ಒಟ್ಟು 26,000 ಕೋಟಿ ರೂಪಾಯಿ ಇದೆ.

    ಕರೊನಾ ಸೃಷ್ಟಿಸಿದ ಸ್ಥಿತಿ: ಈ ಯೋಜನೆಗಳನ್ನು ಮುಚ್ಚಿದ್ದು ಏಕೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಕೋವಿಡ್-19 ಸಾಂಕ್ರಾಮಿಕತೆ ಹಾಗೂ ಅದರ ಹಿನ್ನೆಲೆಯಲ್ಲಿ ಹೇರಲಾದ ಲಾಕ್​ಡೌನ್​ನಿಂದ ಉಂಟಾದ ಸನ್ನಿವೇಶಗಳನ್ನು ಮೊದಲು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಲಾಕ್​ಡೌನ್​ನಿಂದಾಗಿ ಅನೇಕ ಜನರು ಆರ್ಥಿಕ ಸಮಸ್ಯೆಗಳನ್ನು ಎದುರಿಸಿದರು. ಅನೇಕ ಮಂದಿ ಗಾಬರಿಯಿಂದ ತಾವು ಹೂಡಿದ್ದ ಹಣವನ್ನು ವಾಪಸ್ ಪಡೆಯಲು (ವಿತ್​ಡ್ರಾ) ಮುಂದಾದರು. ಆದರೆ, ಫ್ರಾಂಕ್ಲಿನ್ ಟೆಂಪಲ್ಟನ್​ನಂಥ ಅನೇಕ ಮು್ಯೂಚುವಲ್ ಫಂಡ್​ಗಳು ಹೂಡಿಕೆದಾರರ ಹಣವನ್ನು ಕಾರ್ಪೆರೇಟ್ ಸಂಸ್ಥೆಗಳು ಅಥವಾ ಸರ್ಕಾರಿ ಸಂಸ್ಥೆಗಳಿಗೆ ಸಾಲವಾಗಿ ನೀಡಿದ್ದರಿಂದ ಹೂಡಿಕೆದಾರರು ಕೇಳಿದಾಕ್ಷಣ ಹಿಂದಿರುಗಿಸಲು ಅವರ ಬಳಿ ಹಣವಿರಲಿಲ್ಲ.

    ಸಾಲ ತರಲು ಚಿಂತನೆ: ವಿತ್​ಡ್ರಾವಲ್ ಬೇಡಿಕೆ ಮತ್ತು ಲಭ್ಯ ಹಣದ ನಡುವಿನ ಅಂತರವನ್ನು ತಗ್ಗಿಸಿ ಹೂಡಿಕೆದಾರರ ಅವಶ್ಯಕತೆ ಈಡೇರಿಸುವ ಉದ್ದೇಶದಿಂದ ವಿವಿಧ ಮೂಲಗಳಿಂದ ಸಾಲ ತರಲು ಮ್ಯೂಚುವಲ್ ಫಂಡ್ ಕಂಪನಿಗಳು ನಿರ್ಧರಿಸಿದವು. ಆದರೆ ಉದ್ದೇಶಿತ ವಿತ್​ಡ್ರಾವಲ್ ಮೊತ್ತ ಭಾರಿ ದೊಡ್ಡ ಪ್ರಮಾಣದಲ್ಲಿ ಇದ್ದಿದ್ದರಿಂದ ಸಾಲ ತಂದು ಹೂಡಿಕೆದಾರರಿಗೆ ವಿತರಿಸಲು ಅಸಾಧ್ಯ ಎಂಬ ಸನ್ನಿವೇಶ ನಿರ್ವಣವಾಯಿತು. ಆದ್ದರಿಂದ ಹೂಡಿಕೆದಾರರ ವಿತ್​ಡ್ರಾವಲ್ ಹಕ್ಕನ್ನು ತಡೆಹಿಡಿಯಲು (ಬ್ಲಾಕ್ ಮಾಡಲು) ಫ್ರಾಂಕ್ಲಿನ್ ನಿರ್ಧರಿಸಿತು. ಅನೇಕ ವರ್ಷಗಳಿಂದ ಈ ಸಾಲ ಯೋಜನೆಗಳು ಸಾಧಿಸಿರುವ ಮೌಲ್ಯವನ್ನು ರಕ್ಷಿಸುವ ಸಲುವಾಗಿ ಇವನ್ನು ಮುಚ್ಚುವ ನಿರ್ಧಾರ ಕೈಗೊಳ್ಳಬೇಕಾಯಿತು ಎಂದು ಅದು ಹೇಳಿಕೊಂಡಿದೆ. ವಿತ್​ಡ್ರಾವಲ್ ಪ್ರಮಾಣ ಇದೇ ರೀತಿ ಮುಂದುವರಿದರೆ ಒಂದೋ ತನ್ನ ನಿಧಿಯನ್ನು ಬೇರೆ ಮ್ಯೂಚುವಲ್ ಫಂಡ್ ಅಥವಾ ಬ್ಯಾಂಕ್​ಗಳಿಗೆ ಮಾರಬೇಕಾಗುತ್ತಿತ್ತು ಅಥವಾ ಸಾಲ ತಂದು ಹೂಡಿಕೆದಾರರಿಗೆ ಹಣ ನೀಡಬೇಕಾಗುತ್ತಿತ್ತು.

    ಇದನ್ನೂ ಓದಿ: ದುಬೈನಲ್ಲಿ ಕೆಲಸ ಕಳೆದುಕೊಂಡ ಭಾರತೀಯ ರಾತ್ರೋರಾತ್ರಿ ಕೋಟ್ಯಧಿಪತಿಯಾದ! ಅದೃಷ್ಟವೆಂದರೆ ಇದೇ ನೋಡಿ

    ಆಗ ಹೂಡಿಕೆ ಮೇಲಿನ ಬಡ್ಡಿ ಅಥವಾ ಲಾಭದ ದರ ಅನಿವಾರ್ಯವಾಗಿ ಕಡಿಮೆಯಾಗುತ್ತದೆ. ಆದರೆ ಯೋಜನೆಯನ್ನು ಕ್ಲೋಸ್ ಮಾಡಿದರೆ ಹೂಡಿಕೆದಾರರ ಹಣ ಸ್ಥಗಿತಗೊಂಡು ವಿತ್​ಡ್ರಾವಲ್ ನಿಲ್ಲುತ್ತದೆ. ಅದು ಮೆಚ್ಯೂರ್ ಆಗಿ ಮುಂದಿನ ದಿನಗಳಲ್ಲಿ ಅದರ ಹಣವನ್ನು ಹೂಡಿಕೆದಾರರಿಗೆ ನೀಡುವುದು ಫ್ರಾಂಕ್ಲಿನ್​ನ ಉದ್ದೇಶ. ಆದರೆ ಇಂಥ ಆಲೋಚನೆಯನ್ನು ಹೂಡಿಕೆದಾರರು ಖಂಡಿತಕ್ಕೂ ಒಪ್ಪಲಾರರು. ತಮ್ಮದೇ ಹಣ ತಮಗೆ ಅಗತ್ಯವಿದ್ದಾಗ ಸಿಗದಿದ್ದರೆ ಹೇಗೆ ಎಂಬ ಅಂಶ ಅವರನ್ನು ಸಹಜವಾಗಿಯೇ ಹತಾಶೆಗೆ ತಳ್ಳಿತು.

    ಹೈಕೋರ್ಟ್​ಗೆ ಮೊರೆ: ತಮ್ಮ ಅನುಮತಿಯಿಲ್ಲದೆ ಫ್ರಾಂಕ್ಲಿನ್ ಟೆಂಪಲ್ಟನ್ ಕೈಗೊಂಡ ಕ್ರಮ ಪ್ರಶ್ನಿಸಿ ಕೆಲವು ಹೂಡಿಕೆದಾರರು ಕರ್ನಾಟಕ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದರು. ಸಾಲ ಯೋಜನೆಯನ್ನು ಕ್ಲೋಸ್ ಮಾಡುವ ಮುನ್ನ ಹೂಡಿಕೆದಾರರನ್ನು ಸಂರ್ಪಸಬೇಕೆನ್ನುವುದು ಕಾನೂನಿನಲ್ಲಿದೆ ಎಂಬುದು ಹೂಡಿಕೆದಾರರ ವಾದ. ಆದರೆ, ಪ್ರತಿಯೊಬ್ಬರ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಹೂಡಿಕೆದಾರರಿಂದ ನಂತರ ಸ್ಥಿರೀಕರಣ ಪಡೆಯಲಾಗುವುದು. ಹೂಡಿಕೆದಾರರ ಅನುಮತಿ ಪಡೆದು ಕ್ಲೋಸ್ ಮಾಡುವುದೆಂದರೆ ಅದೊಂದು ಅನರ್ಥಕಾರಿ ಕ್ರಮವಾಗುತ್ತದೆ ಎಂದು ಕಂಪನಿ ವಾದಿಸಿತ್ತು.

    ಕಂಪನಿಯ ವಾದಗಳಿಂದ ತೃಪ್ತವಾಗದ ಕರ್ನಾಟಕ ಹೈಕೋರ್ಟ್, ಯೋಜನೆಗಳನ್ನು ಕ್ಲೋಸ್ ಮಾಡಲು ಹೂಡಿಕೆದಾರರ ಅನುಮತಿ ಪಡೆಯುವುದು ಕಾನೂನು ಪ್ರಕಾರ ಅಗತ್ಯ ಎಂದು 2020 ಅಕ್ಟೋಬರ್ 24ರಂದು ನೀಡಿದ ತೀರ್ಪಿನಲ್ಲಿ ಸ್ಪಷ್ಟಪಡಿಸಿತು. ಇದನ್ನು ಕಂಪನಿ ಸುಪ್ರೀಂ ಕೋರ್ಟ್​ನಲ್ಲಿ ಪ್ರಶ್ನಿಸಿತು. ನ್ಯಾಯಾಲಯವು ಡಿಸೆಂಬರ್ 2ರಂದು ಆದೇಶ ಹೊರಡಿಸಿ ಎಲ್ಲ ಹೂಡಿಕೆದಾರರ ಸಭೆ ಕರೆದು ಯೋಜನೆಗಳನ್ನು ಕ್ಲೋಸ್ ಮಾಡಲು ಅವರ ಅನುಮತಿ ಪಡೆಯುವಂತೆ ನಿರ್ದೇಶಿಸಿತು. ಅದರ ಪ್ರಕಾರ, ಆನ್​ಲೈನ್​ನಲ್ಲಿ ಇ-ವೋಟಿಂಗ್​ಗೆ ಕಂಪನಿ ಅವಕಾಶ ಕಲ್ಪಿಸಿದೆ. ಸಾಲ ಯೋಜನೆ ಕ್ಲೋಸ್ ಮಾಡಲು ಅನುಮತಿ ನೀಡಬೇಕೇ ಅಥವಾ ಪುನರಾರಂಭಿಸಲು ವೋಟ್ ಮಾಡಬೇಕೇ ಎನ್ನುವುದನ್ನು ಹೂಡಿಕೆದಾರರು ನಿರ್ಧರಿಸಬೇಕಿದೆ. ಇ-ವೋಟಿಂಗ್ ಮೇಲುಸ್ತುವಾರಿಗೆ ವೀಕ್ಷಕರೊಬ್ಬರನ್ನು ನೇಮಿಸುವಂತೆ ಷೇರು ಮಾರುಕಟ್ಟೆ ನಿಯಂತ್ರಣ ಸಂಸ್ಥೆ ಸೆಬಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಮ್ಯೂಚುವಲ್ ಫಂಡ್​ಗಳಲ್ಲಿ ಅಡಕವಾಗಿರುವ ಅಪಾಯಗಳ ಬಗ್ಗೆ ಹೂಡಿಕೆದಾರರು ಹೆಚ್ಚಿನ ಜಾಗೃತಿ ಹೊಂದಿರಬೇಕೆನ್ನುವುದನ್ನು ಈ ಪ್ರಕರಣ ತೋರಿಸಿಕೊಟ್ಟಿದೆ. ಈ ಸಂಬಂಧ ಒಂದು ಕಾನೂನು ರೂಪಿಸುವುದು ಸೂಕ್ತ. ಹೂಡಿಕೆದಾರರು ಮತ್ತು ಮಾರುಕಟ್ಟೆ ವಾಸ್ತವತೆ ನಡುವಿನ ಮಾಹಿತಿ ಕೊರತೆ, ಅಸಮಾನತೆಯನ್ನು ತೊಡೆದುಹಾಕಲು ಅದು ತೀರಾ ಅವಶ್ಯ.

    (ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)

    VIDEO: ಶೂಟಿಂಗ್​ ವೇಳೆ ನಟನನ್ನು ಎಳೆದೊಯ್ದ ಟಿಲ್ಲರ್​- ಸ್ವಲ್ಪದರಲ್ಲೇ ತಪ್ಪಿದೆ ಅಪಾಯ

    ಸಾಯುವಾಗಲೂ ಮಗನಿಗೆ ಬಿಯರ್​ ಕುಡಿಯೋಕೆ ದುಡ್ಡು ಕೊಟ್ಟ ಅಪ್ಪ!

    ಮಲತಾಯಿಯನ್ನೇ ರೇಪ್​ ಮಾಡಿದ ಕಾಮುಕ ಮಗ! ವಿಚಾರ ಹೊರಬರದಿರುವಂತೆ ನೋಡಿಕೋ ಎಂದ ಕುಟುಂಬಸ್ಥರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts