ಹೈದರಾಬಾದ್: ಜ್ಯೂನಿಯರ್ ಎನ್ಟಿಆರ್ ಅಭಿನಯದ ‘ಎನ್ಟಿಆರ್ 30’ ಚಿತ್ರಕ್ಕೆ ಇತ್ತೀಚೆಗಷ್ಟೇ ಬಾಲಿವುಡ್ ನಟಿ ಮತ್ತು ಶ್ರೀದೇವಿ ಅವರ ಮಗಳು ಜಾಹ್ನವಿ ಕಪೂರ್ ಎಂಟ್ರಿಯಾಗಿದ್ದು ಗೊತ್ತೇ ಇದೆ. ಈಗ ಬಾಲಿವುಡ್ನ ಮತ್ತೊಬ್ಬ ಜನಪ್ರಿಯ ನಟ, ಈ ಚಿತ್ರಕ್ಕೆ ಎಂಟ್ರಿ ಕೊಟ್ಟಿರುವ ಸುದ್ದಿಯೊಂದು ಬಾಲಿವುಡ್ ಅಂಗಳದಲ್ಲಿ ಕೇಳಿ ಬಂದಿದೆ.
ಇದನ್ನೂ ಓದಿ: ಏ. 28ಕ್ಕೆ ಬಿಡುಗಡೆಯಾಗಲಿದೆ ಜಗ್ಗೇಶ್ ಅಭಿನಯದ ‘ರಾಘವೇಂದ್ರ ಸ್ಟೋರ್ಸ್’ …
ಬಾಲಿವುಡ್ನಲ್ಲಿ ಚೋಟೇ ನವಾಬ್ ಎಂದೇ ಜನಪ್ರಿಯರಾಗಿರುವ ಸೈಫ್ ಅಲಿ ಖಾನ್, ಈಗ ‘ಎನ್ಟಿಆರ್ 30’ ಚಿತ್ರದಲ್ಲಿ ವಿಲನ್ ಆಗಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಸೈಫ್ ಆಗಲೀ, ಚಿತ್ರತಂಡದವರಾಗಲೀ ಇನ್ನೂ ಈ ವಿಷಯವನ್ನು ಖಚಿತಪಡಿಸಿಲ್ಲ. ಹಾಗಾಗಿ, ಚಿತ್ರತಂಡದಿಂದ ಅಧಿಕೃತ ಮಾಹಿತಿಗಾಗಿ ಎಲ್ಲರೂ ಕಾಯುತ್ತಿದ್ದಾರೆ.
ಬಾಲಿವುಡ್ನಲ್ಲಿ ಹಲವು ಚಿತ್ರಗಳಲ್ಲಿ ಹೀರೋ ಆಗಿದ್ದ ಸೈಫ್ ಅಲಿ ಖಾನ್, ತಾನಾಜಿ ಚಿತ್ರದಲ್ಲಿ ಮೊದಲ ಬಾರಿಗೆ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ನಂತರ ಪ್ರಭಾಸ್ ಅಭಿನಯದ ‘ಆದಿಪುರುಷ್’ನಲ್ಲಿ ಅವರು ರಾವಣನಾಗಿ ಕಾಣಿಸಿಕೊಂಡಿದ್ದರು. ಈಗ ಜ್ಯೂನಿಯರ್ ಎನ್ಟಿಆರ್ ವಿರುದ್ಧ ತೊಡೆ ತಟ್ಟುವುದಕ್ಕೆ ಹೊರಟಿದ್ದಾರೆ.
ಇದನ್ನೂ ಓದಿ: ಯಶ್ ಅಭಿನಯದ ಹೊಸ ಚಿತ್ರದ ಘೋಷಣೆ ಯಾವಾಗ? ಇಲ್ಲಿದೆ ಮಾಹಿತಿ …
ಈ ಹೆಸರಿಡದ ಚಿತ್ರವನ್ನು ಕೊರಟಾಲ ಶಿವ ನಿರ್ಮಾಣ ಮಾಡುತ್ತಿದ್ದು, ನಂದಮೂರಿ ತಾರಕ ರಾಮರಾವ್ ಆರ್ಟ್ಸ್ನಡಿ ನಿರ್ಮಾಣ ಮಾಡಲಾಗುತ್ತಿದೆ. ಚಿತ್ರಕ್ಕೆ ರತ್ನವೇಲು ಛಾಯಾಗ್ರಹಣ ಮತ್ತು ಅನಿರುದ್ಧ್ ರವಿಚಂದರ್ ಸಂಗೀತವಿರಲಿದೆ.