

ಬೆಂಗಳೂರು: ಸಂಗೀತಾಸಕ್ತರ ಮನತಣಿಸಲು ಕಳೆದ 25 ವರ್ಷಗಳಿಂದ ನಿರಂತರ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವ ಸಾಧನ ಸಾಂಸ್ಕೃತಿಕ ನಿಕ್ಷೇಪ (ಸಾಸಾನಿ) ಮನೆಯಂಗಳದಲ್ಲಿ ಸಂಗೀತ ಕಾರ್ಯಕ್ರಮವನ್ನು ನಡೆಸುತ್ತಿದ್ದು, ಅದರ ಭಾಗವಾಗಿ ಆಯೋಜಿಸಿದ್ದ ನಾದ ವಸಂತ ಎಂಬ ವಿನೂತನ ಕಾರ್ಯಕ್ರಮ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು.
ಸಾಸಾನಿ ಮತ್ತು ಸೂರ್ಯ ಆಗ್ರೋಟೆಕ್ ಸಹಯೋಗದಲ್ಲಿ ಸುಚಿತ್ರ ಫಿಲಂ ಸೊಸೈಟಿಯ ನಾಣಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ನಾದ ವಸಂತ ಕಾರ್ಯಕ್ರಮದಲ್ಲಿ ಗಾಯಕ ಪ್ರಸನ್ನ ವೈದ್ಯ ಅವರು ರಾಗ ಮನೋರಂಜನಿಯನ್ನು ರೂಪಕ್ ತಾಲ್ ಹಾಗೂ ಏಕ್ ತಾಳಗಳಲ್ಲಿ ಪ್ರಸ್ತುತಪಡಿಸಿದರು. ದಾಸರ ಪದಗಳನ್ನು ಸುಶ್ರಾವ್ಯವಾಗಿ ಹಾಡಿ ಜನಮನಗಳನ್ನು ಸೂರೆಗೊಂಡರು.
ಡಾ. ಅಶೋಕ್ ಹುಗ್ಗಣ್ಣವರ ರಾಗ ಭೂಪಾಲಿ ತೋಡಿಯಲ್ಲಿ ವಿಲಂಬಿತ್ ಏಕ್ ತಾಲ್ ಹಾಗೂ ಧೃತ್ ತೀನ್ ತಾಳಗಳಲ್ಲಿ ತಮ್ಮ ಗಾಯನ ನಡೆಸಿಕೊಟ್ಟರು. ದಾಸರಪದ ಹಾಗೂ ಅಪರೂಪದ ರಂಗಗೀತೆಗಳಿಂದ ಪ್ರೇಕ್ಷಕರನ್ನು ರಂಜಿಸಿದರು.
ಇಬ್ಬರು ಗಾಯಕರಿಗೆ ಸಂವಾದಿನಿ ಸಹಕಾರದಲ್ಲಿ ಮಧುಸೂದನ್ ಭಟ್ ಹಾಗೂ ತಬಲಾದಲ್ಲಿ ಕೌಶಿಕ್ ಭಟ್ ಮತ್ತು ಸಹಗಾಯನದಲ್ಲಿ ಅನಿರುದ್ಧ ಐತಾಳ , ಆದಿತ್ಯ ಹಾಗೂ ಸುಹೃತ್ ಸಾಥ್ ನೀಡಿದರು.