

Arjun Tendulkar : ಭಾರತದ ಮಾಜಿ ಕ್ರಿಕೆಟಿಗ ಸಚಿತ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಬುಧವಾರ (ಆಗಸ್ಟ್ 13) ಸಾನಿಯಾ ಚಾಂದೋಕ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತೆಂಡೂಲ್ಕರ್ ಕುಟುಂಬವು ಸಾಮಾಜಿಕ ಮಾಧ್ಯಮದಲ್ಲಿ ಸಮಾರಂಭದ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. ಆದರೆ ಈ ಕುರಿತಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಆಪ್ತ ಸ್ನೇಹಿತರು ಮತ್ತು ಎರಡೂ ಕುಟುಂಬಗಳ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಅರ್ಜುನ್ ಮತ್ತು ಸಾನಿಯಾ ಚಾಂದೋಕ್ ಉಂಗುರ ಬದಲಾಯಿಸಿಕೊಂಡರು. ಆದಾಗ್ಯೂ, ಸಾಮಾಜಿಕ ಮಾಧ್ಯಮದಲ್ಲಿ ಸಮಾರಂಭದ ಬಗ್ಗೆ ತೆಂಡೂಲ್ಕರ್ ಅಥವಾ ಘಾಯ್ ಕುಟುಂಬ ಈ ನಿಶ್ಚಿತಾರ್ಥದ ಬಗ್ಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ.
ಸಾನಿಯಾ ಘಾಯ್ ಕುಟುಂಬದ ಯುವತಿಯಾಗಿದ್ದಾರೆ. ಮುಂಬೈನ ಅತ್ಯಂತ ಪ್ರಮುಖ ವ್ಯಾಪಾರ ಕುಟುಂಬಗಳಲ್ಲಿ ಒಂದಾದ ಘಾಯ್ ಕುಟುಂಬದಿಂದ ಬಂದವರು. ಘಾಯ್ ಕುಟುಂಬವು ಮುಂಬೈನಲ್ಲಿ ಬಹಳ ಪ್ರಸಿದ್ಧ ವ್ಯಾಪಾರ ಕುಟುಂಬವಾಗಿದೆ. ಸಾನಿಯಾ ಚಂದೋಕ್ ಮುಂಬೈ ಮೂಲದ ಉದ್ಯಮಿ ರವಿ ಘಾಯ್ ಅವರ ಮೊಮ್ಮಗಳು. ರವಿ ಘಾಯ್ ಬ್ರೂಕ್ಲಿನ್ ಕ್ರೀಮರಿಯ ಮೂಲ ಕಂಪನಿಯಾದ ಗ್ರಾವಿಸ್ ಗ್ರೂಪ್‌ನ ಅಧ್ಯಕ್ಷರು. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ದಾಖಲೆಗಳ ಪ್ರಕಾರ, ಸಾನಿಯಾ ಮುಂಬೈ ಮೂಲದ ಮಿಸ್ಟರ್ ಪಾವ್ಸ್ ಪೆಟ್ ಸ್ಪಾ & ಸ್ಟೋರ್ ಎಲ್‌ಎಲ್‌ಪಿಯಲ್ಲಿ ನಿಯೋಜಿತ ಪಾಲುದಾರ ಮತ್ತು ನಿರ್ದೇಶಕಿಯೂ ಆಗಿದ್ದಾರೆ. ಇವರು ಅರ್ಜುನ್ ತೆಂಡೂಲ್ಕರ್ ಅವರ ಬಾಲ್ಯದ ಗೆಳತಿಕೂಡ ಹೌದು. ಸಾನಿಯಾ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಪದವಿ ಪಡೆದಿದ್ದಾರೆ.
ಅರ್ಜುನ್ ಎಡಗೈ ವೇಗದ ಬೌಲರ್ ಮತ್ತು ಆಲ್‌ರೌಂಡರ್. ಅವರು ದೇಶೀಯ ಕ್ರಿಕೆಟ್‌ನಲ್ಲಿ ಗೋವಾ ಪರ ಆಡುತ್ತಾರೆ. ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಸದಸ್ಯರಾಗಿದ್ದಾರೆ. ಆದಾಗ್ಯೂ, ಅವರಿಗೆ ಆಡಲು ಹೆಚ್ಚಿನ ಅವಕಾಶ ಸಿಗಲಿಲ್ಲ. ಕಳೆದ ಋತುವಿನಲ್ಲಿ, ಅವರು ಇಡೀ ಪಂದ್ಯಾವಳಿಯಲ್ಲಿ ಬೆಂಚ್‌ನಲ್ಲಿ ಕುಳಿತಿದ್ದರು. ಮುಂಬೈ ಇಂಡಿಯನ್ಸ್ ಮೆಗಾ ಹರಾಜಿನಲ್ಲಿ ಅವರಿಗಾಗಿ 30 ಲಕ್ಷಕ್ಕೆ ಬಿಡ್ ಮಾಡಿ ತಂಡಕ್ಕೆ ಸೇರಿಸಿಕೊಂಡಿತು. ಆದರೆ ಇತರ ಫ್ರಾಂಚೈಸಿಗಳು ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಹೆಚ್ಚಿನ ಆಸಕ್ತಿ ತೋರಿಸಲಿಲ್ಲ. ಆದ್ದರಿಂದ, ಅರ್ಜುನ್ ತೆಂಡೂಲ್ಕರ್ ಆಡುವ 11 ರಲ್ಲಿ ಸ್ಥಾನ ಪಡೆಯಲು ಶ್ರಮಿಸಬೇಕಾಗುತ್ತದೆ.