

ಜೈಪುರ: ರಾಜಸ್ಥಾನದಲ್ಲಿ ಕಾಂಗ್ರೆಸ್ ಬಿಕ್ಕಟ್ಟು ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಸಾಗಿದೆ. ಎರಡನೇ ದಿನದ ಸಭೆಗೂ ಡಿಸಿಎಂ ಸಚಿನ್ ಪೈಲಟ್ ಹಾಗೂ ಆತ ಬೆಂಬಲಿಗರೂ ಹಾಜರಾಗಿಲ್ಲ. ಇದು ಬಿಕ್ಕಟ್ಟನ್ನು ಮತ್ತಷ್ಟು ಉಲ್ಬಣಿಸುವಂತೆ ಮಾಡಿದೆ.
ಜೈಪುರ್ನ ಐಷಾರಾಮಿ ರೆಸಾರ್ಟ್ನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಶಾಸಕರ ಸಭೆಯಲ್ಲಿ 104 ಶಾಸಕರು ಹಾಜರಾಗಿದ್ದಾರೆ ಎಂದು ಹೇಳಲಾಗಿದೆ. ಬಹುಮತ ಹಾಜರುಪಡಿಸಲು 101 ಶಾಸಕರು ಸಾಕು. ಹೀಗಾಗಿ ಬಂಡಾಯವೆದ್ದಿರುವ ಸಚಿನ್ ಪೈಲಟ್ ಹಾಗೂ ಬೆಂಬಲಿತ ಶಾಸಕರನ್ನು ಪಕ್ಷದಿಂದ ಕಿತ್ತೊಗೆಯಿರಿ ಎಂಬ ಕೂಗು ಕೇಳಿ ಬಂದಿದೆ. ಇದಕ್ಕೆ ಪೂರಕವಾಗಿ ಸಚಿನ್ ಪೈಲಟ್ನನ್ನು ಡಿಸಿಎಂ ಸ್ಥಾನ ಹಾಗೂ ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಕೂಡ ಸಚಿನ್ ಪೈಲಟ್ ಜತೆ ಮಾತನಾಡಿ ಬಂಡಾಯ ಶಮನಕ್ಕೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಹೀಗಿದ್ದರೂ ಸಭೆಗೆ ಪೈಲಟ್ ಹಾಜರಾಗಿಲ್ಲ. ಇದು ಸಹಜವಾಗಿಯೇ ಉಳಿದ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಅವರನ್ನು ಡಿಎಸಿಂ ಸ್ಥಾನದಿಮದ ಕೆಳಗಿಳಿಸಲಾಗಿದೆ ಎಂದು ಸುರ್ಜೇವಾಲಾ ಹೇಳಿದ್ದಾರೆ.
ಸಚಿನ್ ಪೈಲಟ್ ಹಾಗೂ 19 ಇತರ ಶಾಸಕರು ಸಭೆಯಿಂದ ದೂರವುಳಿದಿದ್ದಾರೆ ಎಮದೇ ಹೇಳಲಾಗಿತ್ತು. ಸಂಖ್ಯಾಬಲದಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಮುಂದಿದ್ದಾರೆ. ಆದರೆ, ಗೆಹ್ಲೋಟ್ಗೆ ಬಹುಮತ ಸಾಧಿಸುವಷ್ಟು ಶಾಸಕರ ಬೆಂಬಲವಿದ್ದರೆ, ರಾಜ್ಯಪಾಲರೆದುರು ಅದನ್ನು ಸಾಬೀತು ಪಡಿಸಲಿ ಎಂದು ಸಚಿನ್ ಬಣದ ಶಾಸಕರು ನಿನ್ನೆಯಷ್ಟೇ ಸವಾಲು ಹಾಕಿದ್ದರು.
ಕಾಂಗ್ರೆಸ್ ತಿಕ್ಕಾಟ ಏನೇ ಇದ್ದರೂ ಅವಿಶ್ವಾಸ ನಿಣರ್ಯಕ್ಕೆ ಒತ್ತಾಯಿಸುವುದಿಲ್ಲವೆಂದು ಬಿಜೆಪಿ ಹೇಳಿದೆ. ಬಿಜೆಪಿ 72 ಶಾಸಕರನ್ನು ಹೊಂದಿದ್ದು, ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷದ 3 ಶಾಸಕರು ಬಿಜೆಪಿಗೆ ಬೆಂಬಲಕ್ಕಿದ್ದಾರೆ.