

ಹರಿಪ್ರಸಾದ್ ನಂದಳಿಕೆ ಕಾರ್ಕಳ
ನಲ್ಲೆಗುತ್ತು ಬಳಿಯ ಶಾಂಭವಿ ನದಿಗೆ ಸುಂದರ ಸೇತುವೆ ನಿರ್ಮಾಣವಾದರೂ ಸೇತುವೆಯ ಎರಡೂ ಬದಿ ರಸ್ತೆಗೆ ಸಮರ್ಪಕ ಡಾಂಬರು ಇಲ್ಲದೆ ವಾಹನ ಸವಾರರು ನಿತ್ಯ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ.
ಕಾರ್ಕಳ ತಾಲೂಕು ಹಾಗೂ ಮೂಡುಬಿದಿರೆ ತಾಲೂಕಿನ ಗಡಿಭಾಗವಾದ ಕಡಂದಲೆ ನಲ್ಲೆಗುತ್ತಿ ಬಳಿಯಲ್ಲಿ ಹರಿಯುವ ಶಾಂಭವಿ ನದಿಗೆ ಅಡ್ಡಲಾಗಿ ಹಲವು ವರ್ಷಗಳ ಹಿಂದೆ ಕಿರು ಕಿಂಡಿಅಣೆಕಟ್ಟು ನಿರ್ಮಾಣ ಮಾಡಲಾಗಿತ್ತು. ಆದರೆ ಪ್ರತಿ ಮಳೆಗಾಲದಲ್ಲಿ ಸೇತುವೆ ಮುಳುಗಡೆಯಾಗಿ ಎರಡೂ ಗ್ರಾಮದ ಸಂಪರ್ಕ ಕಡಿತಗೊಳ್ಳುತ್ತಿತ್ತು. ಹೀಗಾಗಿ ಈ ಭಾಗದ ನೂರಾರು ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಅಣೆಕಟ್ಟು ಸಹಿತ ಸುಂದರ ಸೇತುವೆ ನಿರ್ಮಾಣ ಕಾಮಗಾರಿ ಮುಗಿದು ಸೇತುವೆ ಓಡಾಟಕ್ಕೆ ಯೋಗ್ಯವಾಗಿ ಹಲವು ಸಮಯ ಕಳೆದರೂ ಇನ್ನೂ ಸೇರ್ತುವೆ ಎರಡು ಬದಿಯಲ್ಲಿ ಸಂಪರ್ಕಿಸುವ ರಸ್ತೆಗೆ ಡಾಂಬರು ಹಾಕಿ ಸಮತಟ್ಟು ಮಾಡುವ ಕೆಲಸಕ್ಕೆ ಗುತ್ತಿಗೆದಾರರು ಮುಂದಾಗಿಲ್ಲ.
ಒಂದೆಡೆ ಸಚ್ಚೇರಿಪೇಟೆಯಿಂದ ರೈಸ್‌ಮಿಲ್ ಬಳಿಯಿಂದ ಸಂಪರ್ಕ ಪಡೆಯುವ ರಸ್ತೆ ಸೇತುವೆ ಸಮೀಪಿಸುತ್ತಿದ್ದಂತೆ ಸಂಪೂರ್ಣ ಹದಗೆಟ್ಟು ಡಾಂಬರು, ಜಲ್ಲಿ ಎಲ್ಲವೂ ಚೆಲ್ಲಾಪಿಲ್ಲಿಯಾಗಿ ಬೃಹತ್ ಹೊಂಡ ಗುಂಡಿ ನಿರ್ಮಾಣಗೊಂಡಿದೆ. ಅಲ್ಲದೆ ಮತ್ತೊಂದು ಬದಿಯಲ್ಲಿ ನಲ್ಲೆಗುತ್ತು, ಕಲ್ಲೋಳಿ, ಬೋಳ ಅಂಬರಾಡಿ, ಬೋಳ ಪಂಚಾಯಿತಿ ರಸ್ತೆ ಸಂಪರ್ಕ ಪಡೆಯುವಲ್ಲಿಯೂ ರಸ್ತೆ ತೀರ ಹದಗೆಟ್ಟಿದ್ದು ರಸ್ತೆ ತುಂಬೆಲ್ಲ ಹೊಂಡಗಳೇ ತುಂಬಿವೆ. ರಸ್ತೆಗೆ ಡಾಂಬರು ಭಾಗ್ಯ ಕರುಣಿಸಿ ಎಂದು ಗ್ರಾಮಸ್ಥರು ಸಾಕಷ್ಟು ಬಾರಿ ಜನಪ್ರತಿನಿಧಿಗಳಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನಾವಾಗಿಲ್ಲ ಎನ್ನುವುದು ಗ್ರಾಮಸ್ಥರ ಮಾತು.
ಸೇತುವೆ ನಿರ್ಮಾಣ ವೇಳೆ ಸೇತುವೆ ಬದಿಯಲ್ಲಿ ಮಣ್ಣು ಹಾಕಿ ಸಮತಟ್ಟು ಮಾಡಿದ ಪರಿಣಾಮ ನಿರಂತರವಾಗಿ ಸುರಿಯುವ ಮಳೆಗೆ ರಸ್ತೆ ತುಂಬೆಲ್ಲ ಹೊಂಡ ಗುಂಡಿ ನಿರ್ಮಾಣವಾಗಿ ಕೆಸರು ನೀರು ನಿಂತು ಜನ ಅತ್ತಿಂದಿತ್ತ ಓಡಾಡಲು ಕಷ್ಟ ಪಡುವಂತಾಗಿದೆ. ಇದ್ದ ಡಾಂಬರು ರಸ್ತೆ ಜಲ್ಲಿ ಟಾರು ಎಲ್ಲವೂ ಕಿತ್ತುಹೋಗಿ ಮಣ್ಣಿನ ರಸ್ತೆಯಂತಾಗಿದೆ. ಈ ಭಾಗದಲ್ಲಿ ಯಾವುದೇ ಬಸ್ ಸಂಚಾರವಿಲ್ಲದೆ ಗ್ರಾಮಸ್ಥರು ಒಂದೋ ಸ್ವಂತ ವಾಹನ ಇಲ್ಲವೇ ಬಾಡಿಗೆ ವಾಹನವನ್ನೇ ಅವಲಂಬಿಸಿದ್ದು, ಕೆಲವೊಂದು ಸಂದರ್ಭ ಬಾಡಿಗೆ ವಾಹನಗಳು ಈ ಭಾಗದ ರಸ್ತೆಯಲ್ಲಿ ಓಡಾಡಲು ಹಿಂದೇಟು ಹಾಕುವಂತಾಗಿದೆ. ಹೀಗಾಗಿ ಗ್ರಾಮದ ಜನ ತೊಂದರೆ ಅನುಭವಿಸುವಂತಾಗಿದೆ. ಅದರಲ್ಲೂ ದಾರಿಹೋಕರು ಮಣ್ಣಿನ ರಸ್ತೆಯಂತಾದ ಕೆಸರು ನೀರು ತುಂಬಿದ ರಸ್ತೆಯಲ್ಲೇ ಓಡಾಡುವುದು ಅನಿವಾರ್ಯ.
ಸೇತುವೆ ನಿರ್ಮಾಣಗೊಂಡು ಹಲವು ಸಮಯ ಕಳೆದರೂ ಇದರ ಎರಡೂ ಬದಿಯ ರಸ್ತೆ ಮಾತ್ರ ತೀರ ಹದಗೆಟ್ಟಿದೆ. ಹೀಗಾಗಿ ವಾಹನ ಸವಾರರು ಹಾಗೂ ಪಾದಚಾರಿಗಳು ನಿತ್ಯ ಸಮಸ್ಯೆ ಎದುರಿಸುವಂತಾಗಿದೆ.-ಅಮಿತಾ ಗ್ರಾಮಸ್ಥರು
ಹಲವು ವರ್ಷಗಳ ಹಿಂದೆ ಡಾಂಬರೀಕರಣಗೊಂಡ ರಸ್ತೆಯ ಜಲ್ಲಿ ಟಾರು ಎಲ್ಲವೂ ಕಿತ್ತುಹೋಗಿ ಬರಿ ಮಣ್ಣಿನ ರಸ್ತೆಯಾಗಿದೆ. ಇದರಿಂದ ಎರಡೂ ಗ್ರಾಮವನ್ನು ಸಂಪರ್ಕಿವ ಗ್ರಾಮಸ್ಥರು ಸಾಕಷ್ಟು ತೊಂದರೆಯಾಗುತ್ತಿದ್ದು, ಅಧಿಕಾರಿಗಳು ಕೂಡಲೇ ಎಚ್ಚೆತ್ತು ಡಾಂಬರು ಭಾಗ್ಯ ಕರುಣಿಸಬೇಕು.-ಸುನೀಲ್ ಪೂಜಾರಿ ವಾಹನ ಸವಾರ