

ಇಂದೋರ್ (ಮಧ್ಯಪ್ರದೇಶ): ಇಲ್ಲಿಯ ಯುವ ಉದ್ಯಮಿ, ನಾಲ್ಕು ಕಂಪೆನಿಗಳ ಮಾಲೀಕ 28 ವರ್ಷದ ಪಂಕಜ್ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಇಂದೋರ್ ನಗರದ ಕನಾಡಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಹೋಟೆಲ್ನಲ್ಲಿ ಈ ಘಟನೆ ನಡೆದಿದೆ. ಮುಂಬೈನಲ್ಲಿ ನಾಲ್ಕು ಇವೆಂಟ್ ಮ್ಯಾನೇಜ್‍ಮೆಂಟ್ ಕಂಪನಿ ಮಾಲೀಕರಾಗಿದ್ದ ಪಂಕಜ್ ಅವರ ಸಾಧನೆಗಾಗಿ ಅವರ ಹೆಸರು ಗಿನ್ನೆಸ್ ಬುಕ್ನಲ್ಲಿಯೂ ದಾಖಲಾಗಿದೆ ಎಂದು ಹೇಳಲಾಗುತ್ತಿದೆ.
ರಾಜಕೀಯ ಮುಖಂಡ ಸಂಜಯ್ ಶುಕ್ಲಾ ಮಗನ ಮದುವೆ ಆಯೋಜಿಸಲು ಪಂಕಜ್ ಇಂದೋರ್ಗೆ ಆಗಮಿಸಿದ್ದರು. ಮಂಗಳವಾರ ರಾತ್ರಿ ಮದುವೆ ಕೆಲಸ ಮಾಡಿದ್ದ ಪಂಕಜ್, ಸುಸ್ತಾಗಿದೆ ಎಂದು ಹೋಟೆಲ್ಗೆ ತೆರಳಿದ್ದರು. ಬೆಳಗ್ಗೆ ಬಂದ ಸಿಬ್ಬಂದಿ ಕೋಣೆಯ ಬಾಗಿಲು ತೆಗೆದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪಂಕಜ್ ಶವ ಪತ್ತೆಯಾಗಿರುವುದಾಗಿ ಹೇಳಲಾಗಿದೆ.
ಸ್ಥಳಕ್ಕೆ ಪೊಲೀಸರು ಆಗಮನಿಸಿದ್ದಾಗ ಪಂಕಜ್ ಅವರ ಡೈರಿ ಅವರಿಗೆ ಲಭ್ಯವಾಗಿದ್ದು, ಅದರಲ್ಲಿ ಐ ಲವ್ ಯು ನೀಲಂ ಎಂದು ಬರೆಯಲಾಗಿದೆ. ಅದರಲ್ಲಿ ಕೆಲ ಹಣಕಾಸಿನ ವ್ಯವಹಾರಗಳ ಬಗ್ಗೆ ಮಾಹಿತಿಯೂ ಇದೆ ಎನ್ನಲಾಗಿದೆ.
ಇವರ ಅಕೌಂಟ್ನಲ್ಲಿ ಕೋಟಿ ಕೋಟಿಗಟ್ಟಲೆ ಹಣ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆದ್ದರಿಂದ ಯಾವುದೇ ಹಣಕಾಸಿನ ವ್ಯವಹಾರ ಈ ಆತ್ಮಹತ್ಯೆಯ ಹಿಂದೆ ಇರಲಾರದು ಎಂಬ ಸಂದೇಹ ವ್ಯಕ್ತವಾಗಿದ್ದು, ಇದೀಗ ಡೈರಿಯಲ್ಲಿರುವ ನೀಲಂ ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.