

ಗಾಂಧಿನಗರ (ಗುಜರಾತ್): ತಾನು ಪುರುಷನೊಬ್ಬನ ಜತೆ ಕದ್ದುಮುಚ್ಚಿ ಮಾಡುತ್ತಿದ್ದುದನ್ನು ನೋಡಿದ್ದಾಳೆ ಎಂಬ ಕಾರಣಕ್ಕೆ 11 ವರ್ಷ ಬಾಲಕಿಯೊಬ್ಬಳ ಕೈಯನ್ನು ಕುದಿಯುವ ಎಣ್ಣೆಯಲ್ಲಿ ಹಾಕಿ ಸುಟ್ಟಿರುವ ಭಯಾನಕ ಘಟನೆ ಗುಜರಾತ್ನಲ್ಲಿ ನಡೆದಿದೆ.
ಪಟನ್ನ ಸಂತಲ್ಪುರ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಹೀಗೆ ಹಿಂಸೆ ನೀಡಿರುವ 40 ವರ್ಷದ ಮಹಿಳೆ ಲಖಿ ಮಕ್ವಾನಾಳನ್ನು ಪೊಲೀಸರು ಬಂಧಿಸಿದ್ದಾರೆ.
ಲಖಿ ಪರಪುರುಷನ ಜತೆ ಒಂಟಿಯಾಗಿ ಇದ್ದಳು. ಇದನ್ನು 11 ವರ್ಷದ ಬಾಲಕಿ ನೋಡಿದ್ದಾಳೆ ಎಂಬ ಸಂದೇಹ ಈ ಮಹಿಳೆಗೆ ಶುರುವಾಯ್ತು. ಬಾಲಕಿ ಅಲ್ಲಿಯೇ ಇದ್ದುದರಿಂದ ತನ್ನ ಹೇಯ ಕೃತ್ಯವನ್ನು ನೋಡಿದ್ದಾಳೆ ಎಂಬ ಗುಮಾನಿ ಶುರುವಾಯ್ತು. ನಂತರ ಬಾಲಕಿಯನ್ನು ಕರೆದು ಈ ಬಗ್ಗೆ ಪ್ರಶ್ನಿಸಿದ್ದಾಳೆ. ಆದರೆ ತಾನು ಈ ಕೃತ್ಯವನ್ನು ನೋಡಿಲ್ಲ ಎಂದು ಬಾಲಕಿ ಹೇಳಿದ್ದಾಳೆ. ಆದರೂ ಸಂದೇಹಗೊಂಡ ಮಹಿಳೆ ನೀನು ಇದನ್ನು ನೋಡದಿದ್ದರೆ ಕುದಿಯುವ ಎಣ್ಣೆಯಲ್ಲಿ ಕೈಹಾಕುವಂತೆ ಹೇಳಿದ್ದಾಳೆ. ಬಾಲಕಿ ಹೆದರಿ ಅಲ್ಲಿಂದ ತಪ್ಪಿಸಿಕೊಳ್ಳಲು ನೋಡಿದ್ದಾಳೆ. ಆದರೆ ಸುಮ್ಮನೇ ಬಿಡದ ಮಹಿಳೆ ಆಕೆಯ ಕೈಯನ್ನು ಕುದಿಯುತ್ತಿರುವ ಎಣ್ಣೆಗೆ ಹಾಕಿದ್ದಾಳೆ. ಬಾಲಕಿ ಚೀರಿಕೊಂಡು ಅಲ್ಲಿಂದ ಓಡಿಹೋಗಿ ಅಕ್ಕಪಕ್ಕದವರಿಗೆ ವಿಷಯ ತಿಳಿಸಿದ್ದಾಳೆ.
ಕೂಡಲೇ ಅವರು ಪೊಲೀಸ್ ಠಾಣೆಯಲ್ಲಿ ಮಹಿಳೆ ವಿರುದ್ಧ ದೂರು ದಾಖಲು ಮಾಡಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಆಕೆಯ ವಿರುದ್ಧ ದೂರು ದಾಖಲು ಮಾಡಿಕೊಳ್ಳಲಾಗಿದೆ ಎಂದು ಸಬ್ ಇನ್ಸ್ಪೆಕ್ಟರ್ ಎನ್ ಡಿ ಪರ್ಮಾರ್ ತಿಳಿಸಿದ್ದಾರೆ.
ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಬಾಲಕಿಯ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಹಲ್ಲೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದ ಮೇಲೆ ಮಹಿಳೆ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಗುಜರಾತಿನ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಜಾಗೃತಿಬೆನ್ ಪಾಂಡ್ಯ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಘಟನೆಯ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.