ಗಂಡ ಹೊಲಿದ ರವಿಕೆ ನೋಡಿ ನೊಂದು ಆತ್ಮಹತ್ಯೆ ಮಾಡಿಕೊಂಡ ಮಹಿಳೆ!

blouse
Published on

ಹೈದರಾಬಾದ್: ಟೇಲರ್‌ ಆಗಿರುವ ಗಂಡ, ತಾನು ಹೇಳಿದಂತೆ ಸೀರೆಯ ಬ್ಲೌಸ್‌ ಹೊಲಿಯಲಿಲ್ಲ ಎಂದು ಬೇಸರಗೊಂಡಿರುವ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

ಹೈದರಾಬಾದ್‌ನ ಅಂಬರಪೇಟ್‌ ನಿವಾಸಿ ವಿಜಯಲಕ್ಷ್ಮಿ (36) ಎಂಬುವವರು ಇಂಥ ಕೃತ್ಯ ಎಸಗಿದ್ದಾರೆ. ಇವರ ಗಂಡ ಶ್ರೀನಿವಾಸ್‌ ಟೈಲರ್‌ ಆಗಿದ್ದಾರೆ. ಇಷ್ಟಪಟ್ಟು ಒಂದು ಸೀರೆಯನ್ನು ಖರೀದಿ ಮಾಡಿದ್ದ ವಿಜಯಲಕ್ಷ್ಮಿ ಅವರು ಅದಕ್ಕೆ ಬ್ಲೌಸ್‌ ಹೊಲಿದುಕೊಡುವಂತೆ ಗಂಡನಿಗೆ ಹೇಳಿದ್ದಾರೆ. ತಮಗೆ ಯಾವ ರೀತಿಯ ಬ್ಲೌಸ್‌ ಬೇಕು ಎಂಬ ಬಗ್ಗೆ ಗಂಡನಿಗೆ ತಿಳಿಸಿದ್ದಾರೆ.

ಆದರೆ ಅವರು, ಅದನ್ನು ಹೊಲಿದು ಕೊಟ್ಟಿದ್ದಾರೆ. ಆದರೆ ಅದು ತಾನು ಹೇಳಿದಂತೆ ಆಗಲಿಲ್ಲ ಎಂದು ವಿಜಯಲಕ್ಷ್ಮಿ ಬೇಸರ ವ್ಯಕ್ತಪಡಿಸಿದ್ದಾರೆ. ಇದರ ವಿಷಯವಾಗಿಯೇ ದಂಪತಿ ನಡುವೆ ಜಗಳವಾಗಿದೆ. ಇದರಿಂದ ಬೇಸರಗೊಂಡ ವಿಜಯಲಕ್ಷ್ಮಿ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ.

ಪತ್ನಿ ಸಿಟ್ಟಿನಿಂದ ಒಳಗೆ ಇದ್ದಿರಬಹುದು ಎಂದು ಶ್ರೀನಿವಾಸ್ ಅಂದುಕೊಂಡಿದ್ದಾರೆ. ಮಧ್ಯಾಹ್ನ ಮಕ್ಕಳು ಶಾಲೆಯಿಂದ ಮನೆಗೆ ಬಂದು ಬಾಗಿಲು ತಟ್ಟಿದರೂ ಆಕೆ ಪ್ರತಿಕ್ರಿಯಿಸಲಿಲ್ಲ. ನಂತರ ಸಂದೇಹಗೊಂಡ ಶ್ರೀನಿವಾಸ್ ಬಾಗಿಲು ಒಡೆದು ಒಳ ಹೋಗಿದ್ದಾರೆ. ಈ ವೇಳೆ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದಿದೆ. ಅವರೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸದ್ಯ ತನಿಖೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net